ನ್ಯೂಸ್

ಭಯೋತ್ಪಾದಕ ದಾಳಿ: ಓರ್ವ ಸಾವು! 40ಕ್ಕೂ ಅಧಿಕ ಜನ ಗಂಭೀರ | Terror attack

ಮೋಹನ್​ ಶೆಟ್ಟಿ

ಇಸ್ರೇಲ್: ಇಂದು ಟೆಲ್ ಅವಿವ್‌ನ ನಗರದ ಪ್ರಮುಖ ಸ್ಥಳದಲ್ಲಿ ಬಸ್ ನಿಲ್ದಾಣಕ್ಕೆ ಟ್ರಕ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಸ್ರೇಲ್ ಪೊಲೀಸರು ಇದು ಭಯೋತ್ಪಾದಕ ದಾಳಿ (Suspected Terror Attack) ಎಂದು ಶಂಕೆ ವ್ಯಕ್ತಪಡಿಸಿದ್ದು, ಚಾಲಕನ ಉದ್ದೇಶಗಳ ಬಗ್ಗೆ ಚುರುಕಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯು ಇಂದು ಬೆಳಿಗ್ಗೆ 10 ಗಂಟೆಗೆ ಗ್ಲಿಲೋಟ್ ಮಿಲಿಟರಿ ನೆಲೆಯ ಸಮೀಪ ಸಂಭವಿಸಿದೆ. ಇಸ್ರೇಲಿ ಪ್ರಜೆಯಾದ ಟ್ರಕ್ ಚಾಲಕ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣಿಸುವಾಗ ಮಾರ್ಗವನ್ನು ತಿರುಗಿಸಿ, ನೇರವಾಗಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸುಮಾರು 40 ಜನರಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಟೆಲ್ ಅವಿವ್‌ನ ಇಚಿಲೋವ್ ವೈದ್ಯಕೀಯ ಕೇಂದ್ರ ಸೇರಿದಂತೆ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ.

ಇದೊಂದು ಭಯೋತ್ಪಾದಕ ದಾಳಿ ಎಂದು ಶಂಕಿಸಿರುವ ಇಸ್ರೇಲ್ ಪೊಲೀಸರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.