ನ್ಯೂಸ್

ನೇಪಾಳ ಜೈಲಿನಿಂದ ಕಾಲ್ಕಿತ್ತಿದ್ದ ಶಂಕಿತ ಪಾಕ್​ ಮಹಿಳೆ ತ್ರಿಪುರಾದಲ್ಲಿ ಬಂಧನ!Suspected Pak Woman

ತ್ರಿಪುರ: ಮಾದಕವಸ್ತು ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರುವ ಪಾಕ್​ ಪ್ರಜೆಯನ್ನು(Suspected Pak Woman) ದಕ್ಷಿಣ ತ್ರಿಪುರ ಜಿಲ್ಲೆಯ ಸಬ್ರೂಮ್‌ನ ರೈಲ್ವೆ ಪೊಲೀಸರು ಸೋಮವಾರ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಲೂಯಿಸ್ ನಿಘಾತ್ ಅಖ್ತರ್ ಭಾನೋ (65) ಎಂದು ಗುರುತಿಸಲಾಗಿದೆ. ಈಕೆ ಬಾಂಗ್ಲಾದೇಶದ ಗಡಿಯಿಂದ ಇನ್ನೊಂದು ಗಡಿಗೆ ದಾಟುವ ಉದ್ದೇಶದಿಂದ ತ್ರಿಪುರಕ್ಕೆ ಬಂದಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಆಕೆಯ ಚಲನವಲನಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಬ್ರೂಮ್ ಪೊಲೀಸ್ ಅಧಿಕಾರಿ ನಿತ್ಯಾನಂದ ಸರ್ಕಾರ್ ಹೇಳಿದ್ದಾರೆ.

ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಮಹಿಳೆಯು ನೇಪಾಳದ ಜೈಲಿನಿಂದ ತಪ್ಪಿಸಿಕೊಂಡಿದ್ದಾಳೆ ಹಾಗೂ ಪಾಕಿಸ್ತಾನದ ಸಂಪರ್ಕ ಹೊಂದಿರಬಹುದು ಎಂದು ತಿಳಿದುಬಂದಿದೆ. ಇನ್ನೂ ಆಕೆಯ ಗುರುತು ಹಾಗೂ ಹಿನ್ನಲೆಯನ್ನು ಪರಿಶೀಲಿಸಲು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಭಾನೋ ಪಾಕ್​ ನಿವಾಸಿಯಾದ ಗೋಲಾಫ್ ಫರಾಜ್​ನ ಪತ್ನಿ ಎಂದು ವರದಿಯಾಗಿದ್ದು, ಈಕೆ 12 ವರ್ಷಗಳ ಹಿಂದೆ ಪಾಕಿಸ್ತಾನಿ ಪಾಸ್​ಪೋರ್ಟ್​ ಬಳಸಿ ಮಾದಕವಸ್ತು ಸಾಗಾಣೆ ಮಾಡಲು ನೇಪಾಳಕ್ಕೆ ಬಂದಿದ್ದಳು ಎಂದು ಹೇಳಿದ್ದಾರೆ.

ಈ ಹಿಂದೆ 2014 ರಲ್ಲಿ 1 ಕೆಜಿ ಕಂದು ಸಕ್ಕರೆಯನ್ನು ಸಾಗಿಸುತ್ತಿರುವುದಾಗಿ ನೇಪಾಳ ಪೊಲೀಸರು ಆಕೆಯನ್ನು ಬಂಧಿಸಿದ್ದು, 15 ವರ್ಷಗಳ ಜೈಲು ಶಿಕ್ಷೆಗೆ ಒಳಪಡಿಸಿದ್ದರು. ಇನ್ನು ಕಳೆದ ತಿಂಗಳವರೆಗೂ ಕಠ್ಮಂಡು ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು, ನೇಪಾಳದಲ್ಲಿ ವ್ಯಾಪಕ ಅಶಾಂತಿ ಉಂಟಾದ ಹಿನ್ನಲೆ ಆಕೆ ತಪ್ಪಿಸಿಕೊಂಡಿದ್ದಾಳೆ ಎಂದು ಮಾಹಿತಿ ಬಂದಿದೆ.

ಸೆಪ್ಟೆಂಬರ್ 2025 ರಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಮಧ್ಯೆ ನೇಪಾಳದಾದ್ಯಂತ ಸಾಮೂಹಿಕವಾಗಿ ಜೈಲ್​ ಬ್ರೇಕ್​ಗಳು ನಡೆದವು. ಇದರ ಪರಿಣಾಮ ಸುಮಾರು 13 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದರು. ಈ ವೇಳೆ ಭಾರತಕ್ಕೆ ಪಲಾಯನ ಮಾಡಲು ಯತ್ನಿಸಿದ ಆರೋಪಿಗಳನ್ನು ಗಡಿಭಾಗದಲ್ಲೇ ಬಂಧಿಸಿದ್ದಾರೆ.

ಇನ್ನು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆಕೆಯ ಹೆಚ್ಚಿನ ತನಿಖೆಗೆ ಅನುಕೂಲವಾಗುವಂತೆ ಪೊಲೀಸ್​ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)