ನ್ಯೂಸ್

ಮಾವ-ಸೊಸೆ ನಡುವೆ ಅನೈತಿಕ ಸಂಬಂಧ ಶಂಕೆ; ತಂದೆಯನ್ನೇ ಕೊಂದ ಮಗ| murder

ಚಾಮರಾಜನಗರ: ತನ್ನ ಪತ್ನಿಯೊಂದಿಗೆ ತಂದೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದಾಗಿ ಆರೋಪಿಸಿ, ಸ್ವತಃ ಮಗನೇ ತನ್ನ ತಂದೆಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ‌ಲ್ಲಿ ನಡೆದಿದೆ.

33 ವರ್ಷದ ಜಾನ್ಸನ್ ಎಂಬಾತ ತನ್ನ ತಂದೆಯಾದ 55 ವರ್ಷದ ಪಾಕಿಯಾನಾಥನ್ ಎಂಬುವವರನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಭಾನುವಾರ ರಾತ್ರಿ‌ ಮನೆಯ ಬಳಿಯೇ ಈ ಘಟನೆ ನಡೆದಿದ್ದು, ಪಾಕಿಯಾನಾಥನ್ ತಲೆ‌‌ಗೆ ಕಲ್ಲಿನಿಂದ ಹೊಡೆದ ಪರಿಣಾಮ ಆತ ನೆಲಕ್ಕೆ ಬಿದ್ದು ರಕ್ತ ಹರಿದು ಪ್ರಾಣ ಹೋಗಿದೆ. ಈ ಘಟನೆಯ ಬಳಿಕ ಮಗ ಜಾನ್ಸರ್ ತಲೆಮರೆಸಿಕೊಂಡಿದ್ದಾನೆ.

ಸೊಸೆ-ಮಾವನ ಮೇಲೆ ಅನುಮಾನ

ಈ ಸಂಬಂಧ ಕೊಲೆಯಾದ ಪಾಕಿಯನಾಥನ್ ಸಹೋದರ ಮದಲೈಸ್ವಾಮಿ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿರುವ ಪ್ರಕಾರ, ಜಾನ್ಸನ್ 1 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಒಂದು ಹೆಣ್ಣು ‌ಮಗುವೂ ಇದೆ. ಮದುವೆ ಹೊಸದರಲ್ಲಿ ಹೆಂಡತಿ ಜತೆ ಚೆನ್ನಾಗಿಯೇ ಇದ್ದ. ನಂತರದ‌‌ ದಿನಗಳಲ್ಲಿ ತನ್ನ‌ ಹೆಂಡತಿಗೂ ತನ್ನ ಅಪ್ಪನಿಗೂ ಸಂಬಂಧವಿದೆ ಎಂದು ಜಗಳ ತೆಗೆದಿದ್ದ. ನಿನ್ನ ತಂದೆ ಅವಳಿಗೂ ತಂದೆ ಸ್ಥಾ‌ನದಲ್ಲಿದ್ದಾರೆ ಎಂದು ನಾವೆಲ್ಲರೂ ಬುದ್ಧಿ ಹೇಳಿದ್ದೆವು. ಆದರೂ ಜಗಳ ಮುಂದುವರೆಸಿದ್ದ ಜಾನ್ಸನ್ ಭಾನುವಾರ ರಾತ್ರಿ ತನ್ನ ತಂದೆ ಪಾಕಿಯಾನಾಥನ್ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ‌ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.