ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು 15 ದಿನಗಳಾಗಿವೆ. ಈ 15 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಈ ಆತ್ಮಹತ್ಯೆಗೆ ಕಾರಣವೇನಿರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸುಶಾಂತ್ ಕುಟುಂಬದವರು, ಆಪ್ತರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸ್ ವಿಚಾರಣೆ ನಡೆಸಿದ್ದು, ಹಲವು ವಿಷಯಗಳನ್ನು ದಾಖಲಿಸಿಕೊಂಡಿದ್ದಾರೆ. ಅದೇ ರೀತಿ ದಿಲ್ ಬೇಚಾರಾ ಸಿನಿಮಾದ ನಾಯಕಿ ಸಂಜನಾ ಸಿಂಘಿ ಸಹ ವಿಚಾರಣೆ ಎದುರಿಸಿದ್ದು, ದೆಹಲಿಯತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ: ವೆಬ್ ಸಿರೀಸ್ನಲ್ಲಿ ಪ್ರಕಾಶ್ ರಾಜ್ ಮುಖ್ಯಭೂಮಿಕೆ
ಹೌದು, ಇನ್ಸ್ಟಾ ಪೋಸ್ಟ್ನಲ್ಲಿ ದೆಹಲಿಗೆ ಮರಳುತ್ತಿರುವ ಬಗ್ಗೆ ಬರೆದುಕೊಂಡಿರುವ ಸಂಜನಾ, ಇನ್ಯಾವತ್ತೂ ಮುಂಬೈನತ್ತ ಮುಖ ಹಾಕುವುದಿಲ್ಲ ಎಂದಿದ್ದಾರೆ. ‘ಬೈ ಮುಂಬೈ. ನಿನ್ನ ನೋಡದೇ ನಾಲ್ಕು ತಿಂಗಳಾಯ್ತು. ನಾನು ದೆಹಲಿಗೆ ಮರಳುತ್ತಿರುವೆ. ನಿನ್ನಲ್ಲಿನ ರಸ್ತೆಗಳು ವಿಭಿನ್ನವಾಗಿವೆ. ಎಲ್ಲವೂ ಖಾಲಿ ಖಾಲಿ.. ನನ್ನೊಳಗಿನ ದುಃಖ ನನ್ನನ್ನು ಬದಲಾಯಿಸುತ್ತಿದೆ. ನನ್ನ ದೃಷ್ಟಿಕೋನವನ್ನೂ. ಅಥವಾ ನೀನು ದುಃಖದಲ್ಲಿರಬಹುದು. ಆದಷ್ಟು ಬೇಗ ಮತ್ತೆ ಸಿಗೋಣ ಅಥವಾ ಸಿಗದೆಯೂ ಇರಬಹುದು’ ಎಂದು ವಿಮಾನ ಏರಿದ್ದಾರೆ.
ಒಂದಷ್ಟು ಸಿನಿಮಾ ಕನಸುಗಳನ್ನು ಇಟ್ಟುಕೊಂಡು ಮುಂಬೈ ಮಹಾನಗರಿಗೆ ಬಂದಿದ್ದ ಸಂಜನಾ, ಮೊದಲ ಸಿನಿಮಾದಲ್ಲಿಯೇ ಸುಶಾಂತ್ ಸಿಂಗ್ ರಜಪೂತ್ ಜತೆ ನಟಿಸಿದ್ದರು. ಆ ಸಿನಿಮಾ ಬಿಡುಗಡೆಗೂ ಮುನ್ನವೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ಸಂಜನಾ ಅವರನ್ನೂ ಕಾಡಿತ್ತು. ಇದೀಗ ಸುಶಾಂತ್ ಸಿಂಗ್ ಸಾವಿನ ತನಿಖೆ ಪೂರ್ಣ ಮುಗಿಸಿಕೊಂಡು ಹುಟ್ಟೂರಿಗೆ ಪ್ರಯಾಣ ಬೆಳೆಸಿದ್ದಾರೆ. (ಏಜೆನ್ಸೀಸ್)