ನ್ಯೂಸ್

Sushant Singh Rajput death | ನಟಿ ರಿಯಾ ಚಕ್ರವರ್ತಿಗೆ ಬಿಗ್ ರಿಲೀಫ್; ಸುಪ್ರೀಂಕೋರ್ಟ್​ ಹೇಳಿದಿಷ್ಟು..

ನವದೆಹಲಿ: ಸುಶಾಂತ್​ ಸಿಂಗ್​ ರಜಪೂತ್ ಸಾವಿನ(Sushant Singh Rajput death) ಪ್ರಕರಣಕ್ಕೆ ಸಂಬಂಧಿಸಿದಂತೆ ​ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರಿಗೆ ಸುಪ್ರೀಂಕೋರ್ಟ್​​​ನಿಂದ ಬಿಗ್ ರಿಲೀಫ್ ಸಿಕ್ಕಿದೆ. ರಿಯಾ ಚಕ್ರವತ್ರಿಗೆ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್​ ಔಟ್​ ನೋಟಿಸ್​​​​​​ ಅನ್ನು ನ್ಯಾಯಾಲಯ ಶುಕ್ರವಾರ(ಅಕ್ಟೋಬರ್​ 25) ವಜಾಗೊಳಿಸಿದೆ. ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮತ್ತು ಆಕೆಯ ಸಹೋದರ ಶೋವಿಕ್, ಆಕೆಯ ತಂದೆ ಇಂದ್ರಜಿತ್ ಚಕ್ರವರ್ತಿ ವಿರುದ್ಧ ಕೇಂದ್ರೀಯ ತನಿಖಾ ದಳ 2020ರಲ್ಲಿ ಲುಕ್​ಔಟ್​​ (LOCs) ನೋಟಿಸ್​ ಅನ್ನು ಹೊರಡಿಸಿತ್ತು. ಸಿಬಿಐ ಹೊರಡಿಸಿದ್ದ ಲುಕ್​ಔಟ್​ ನೋಟಿಸ್​ ಅನ್ನು ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಸಿಬಿಐ ಮನವಿಯನ್ನು ಶುಕ್ರವಾರ ತಿರಸ್ಕರಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಮೌಖಿಕವಾಗಿ ಸಿಬಿಐ ಮನವಿಯು ಕ್ಷುಲ್ಲಕ ಎಂದು ಹೇಳಿದೆ. ಅಲ್ಲದೆ ಆರೋಪಿಗಳು ಹೈಪ್ರೊಫೈಲ್ ಆಗಿರುವುದರಿಂದ ಮಾತ್ರ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾಗಿ ಲೈವ್ ಲಾ ವರದಿ ಮಾಡಿದೆ.

ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಆರೋಪಿಗಳಲ್ಲಿ ಒಬ್ಬರು ಹೈಪ್ರೊಫೈಲ್ ವ್ಯಕ್ತಿ ಎಂಬ ಕಾರಣಕ್ಕೆ ನೀವು ಇಂತಹ ಕ್ಷುಲ್ಲಕ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ. ಇದು ಅನುಕರಣೀಯ ವೆಚ್ಚದೊಂದಿಗೆ ಇರುತ್ತದೆ. ಇಬ್ಬರೂ ವ್ಯಕ್ತಿಗಳು ಸಮಾಜದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಸಿಬಿಐ ವಕೀಲರು ಈ ವಿಷಯದ ಪಾಸ್ ಓವರ್‌ಗೆ ಕೋರಿದಾಗ ನ್ಯಾಯಮೂರ್ತಿ ಗವಾಯಿ ಹೇಳಿದರು.

ತನಿಖಾ ಸಂಸ್ಥೆಯಿಂದ ನೀಡಲಾದ ಎಲ್​ಒಸಿಯು ಒಬ್ಬ ವ್ಯಕ್ತಿಯನ್ನು ಬಂಧಿಸಲು, ವ್ಯಕ್ತಿಯನ್ನು ವಿಮಾನ ಹತ್ತುವುದನ್ನು ನಿಲ್ಲಿಸಲು ಅಥವಾ ದೇಶದಿಂದ ವ್ಯಕ್ತಿ ನಿರ್ಗಮಿಸುವ ಬಗ್ಗೆ ಸಂಬಂಧಪಟ್ಟ ಏಜೆನ್ಸಿಗೆ ತಿಳಿಸಲು ಬ್ಯೂರೋ ಆಫ್ ಇಮಿಗ್ರೇಷನ್‌ಗೆ ವಿನಂತಿಸಬಹುದು.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ 2020 ಜೂನ್ 14ರಂದು ಬಾಂದ್ರಾದಲ್ಲಿನ ತಮ್ಮ ಅಪಾರ್ಟ್​​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಟನ ಸಾವಿನ ತನಿಖೆಗೆ ಆಗ್ರಹಿಸಿ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬವು ಪಾಟ್ನಾದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಮತ್ತು ಸುಶಾಂತ್ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಲಾಗಿದೆ ಎಂದು ಆರೋಪಿಸಿದ್ದರು.

ಹೈಪ್ರೊಫೈಲ್ ಪ್ರಕರಣವಾದ್ದರಿಂದ ನಂತರ ಇದರ ತನಿಖೆ ಸಿಬಿಐ ಹೆಗಲಿಗೆ ಬಿದ್ದಿತು. ಈ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದ ವಿರುದ್ಧ ಸಿಬಿಐ ಆಗಸ್ಟ್ 2020ರಲ್ಲಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿತ್ತು. ಈ ಸುತ್ತೋಲೆಯನ್ನು ರಿಯಾ ಮತ್ತು ಅವರ ಕುಟುಂಬದವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್ 2020ರಲ್ಲಿ ರಿಯಾ ಚಕ್ರವರ್ತಿ ಮತ್ತು ಅವರ ಇಬ್ಬರು ಕುಟುಂಬ ಸದಸ್ಯರ ವಿರುದ್ಧ ಸಿಬಿಐ ಹೊರಡಿಸಿದ LOC ಅನ್ನು ರದ್ದುಗೊಳಿಸಿತ್ತು. ಇದೇ ವೇಳೆ ಹೈಕೋರ್ಟ್‌ನ ಆದೇಶವನ್ನು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ ಇಂದು ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.(ಏಜೆನ್ಸೀಸ್​​)