ನ್ಯೂಸ್

ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾಳನ್ನು ರೇಪ್​ ಮಾಡಿ ಸಾಯಿಸಲಾಗಿದೆ

ಮುಂಬೈ: ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಅವರನ್ನು ರೇಪ್​ ಮಾಡಿ ಕೊಲೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ್ ರಾಣೆ ಮಂಗಳವಾರ ಆರೋಪಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ದಿಶಾ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಅದರಲ್ಲಿ ಅವರ ಗುಪ್ತಾಂಗಗಳ ಮೇಲೆ ಗಾಯಗಳಾಗಿದ್ದವು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ದಿಶಾ ಸಾಲಿಯಾನ್​ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಪ್ರಕರಣಗಳ ತಪ್ಪಿತಸ್ಥರನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸುವ ಮೂಲಕ ಈ ಪ್ರಕರಣಕ್ಕೆ ರಾಜಕೀಯ ತಿರುವು ದೊರಕಿಸಿಕೊಟ್ಟಿದ್ದಾರೆ.

ಈ ಪ್ರಕರಣಗಳ ತನಿಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ರಾಜ್ಯ ಸರ್ಕಾರ ಕೂಡ ಭಾಗಿಯಾಗಿದೆ. ದಿಶಾ ಅವರ ಕುಟುಂಬ ವರ್ಗ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸದಂತೆ ಮನವಿ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾಣದ ಕೈಗಳ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ.

ಬಾಲಿವುಡ್​ ನಟ ಡಿನೋ ಮೋರಿಯಾ ಅವರ ಮನೆಯಲ್ಲಿ ಜೂ.13ರಂದು ಪಾರ್ಟಿ ಆಯೋಜನೆಗೊಂಡಿತ್ತು. ಈ ಪಾರ್ಟಿಯಲ್ಲಿ ರಾಜಕಾರಣಿಯೊಬ್ಬರು ಪಾಲ್ಗೊಂಡಿದ್ದರು. ಪಾರ್ಟಿ ಮುಗಿದ ಬಳಿಕ ಎಲ್ಲರೂ ಸುಶಾಂತ್​ ಸಿಂಗ್​ ರಜಪೂತ್​ ಮನೆಗೆ ಹೋಗಿದ್ದರು ಎಂದು ಹೇಳಿದ್ದಾರೆ.