ಚೆನ್ನೈ: ಪ್ರತಿಭೆ ಯಾರಪ್ಪನ ಮನೆ ಸ್ವತ್ತಲ್ಲ ಎಂಬ ಮಾತು ಹಲವು ಭಾರೀ ನಿರೂಪಿತವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಚಿತ್ರರಂಗ. ಚಿತ್ರರಂಗದಲ್ಲಿ ಅನೇಕ ನಟರು ಯಾವುದೇ ಹಿನ್ನೆಲೆ, ಗಾಡ್‌ಫಾದರ್‌ನ ಬೆಂಬಲವಿಲ್ಲದೆ ಪ್ರೇಕ್ಷಕರ ವಿಶ್ವಾಸ ಗಳಿಸಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಇದನ್ನಲ್ಲಾ ಭೇದಿಸಿ ಕೆಲವು ನಟರು ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗದಲ್ಲಿ ಗೆದ್ದು ಬೀಗಿರುವುದನ್ನು ನಾವು ನೋಡಿದ್ದೇವೆ. ಈ ಪೈಕಿ ನಟ ಸೂರ್ಯ ಕೂಡ ಒಬ್ಬರು.
ತಮ್ಮ ಅಭಿನಯ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಸೂರ್ಯ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದು, ರಾಷ್ಟ್ರ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ಕಿರಿಯ ವಯಸ್ಸಿಗೆ ಅನೇಕ ಸಾಧನೆ ಮಾಡಿರುv ಸೂರ್ಯ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ವಂತೆ. ಅವರು ನಟನಾಗಿದ್ದು ಆಕಸ್ಮಿಕವಂತೆ. ಅವರು ಚಿತ್ರರಂಗ ಪ್ರವೇಶಿಸಿದ್ದು, ತಾಯಿಯ ಸಾಲ ತೀರಿಸುವ ಸಲುವಾಗಿ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ.
ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟ ಸೂರ್ಯ, ನಟನಾಗುವ ಮುನ್ನ ನಾನು ಗಾರ್ಮೆಂಟ್ಸ್ ಒಂದರಲ್ಲಿ ದಿನಕ್ಕೆ 50 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದೆ. ನಾನು ಅಲ್ಲೇ ಕಲಸ ಮುಂದುವರೆಸಿ ಮುಂದೊಂದು ದಿನ ನನ್ನದೇ ಸ್ವಂತ ಕಂಪನಿ ಆರಂಭಿಸಬೇಕು ಎಂಬ ಯೋಚನೆಯಲ್ಲಿದ್ದೆ. ನನ್ನ ತಂದೆ ಕೂಡ ನಟರಾಗಿದ್ದರು. ತಮಿಳಿನ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.
ನನ್ನ ತಾಯಿ ತಮದೆಯ ಗಮನಕ್ಕೆ ಬಾರದೆ 25 ಸಾವಿರ ರೂಪಾಯಿ ಸಾಲವನ್ನು ಪಡೆದಿದ್ದರು. 1990ರ ದಶಕದಲ್ಲಿ ಆ ಹಣ ತುಂಬಾ ದೊಡ್ಡ ಮತ್ತವಾಗಿತ್ತು. ಹೀಗಾಗಿ ನಾನು ಆ ಸಾಲವನ್ನು ತೀರಿಸಲು ಅನಿರೀಕ್ಷಿತವಾಗಿ ಚಿತ್ರರಂಗ ಪ್ರವೇಶಿಸಿದೆ. ಚಿತ್ರರಂಗಕ್ಕೆ ಬರುತ್ತೇನೆ ಎಂದು ನಾನು ಯಾವತ್ತೂ ಆಲೋಚಿಸಿರಲಿಲ್ಲ. ಕ್ಯಾಮೆರಾ ಎದುರು ನಿಲ್ಲಬೇಕು ಅಥವಾ ನಟನಾಗಬೇಕು ಎಂಬ ಆಸೆಯೇ ನನಗೆ ಇರಲಿಲ್ಲ. ಅಮ್ಮನಿಗೆ 25 ಸಾವಿರ ರೂಪಾಯಿ ನೀಡಿ, ನಿಮ್ಮ ಸಾಲ ತೀರಿತು, ನೀವಿನ್ನು ಚಿಂತೆ ಮಾಡುವುದು ಬೇಡ ಅಂತ ಹೇಳಬೇಕು ಎಂಬ ಕಾರಣದಿಂದ ನಾನು ಚಿತ್ರರಂಗಕ್ಕೆ ಬಂದೆ. ಹೀಗೆ ನಾನು ನಟನಾ ವೃತ್ತಿ ಶುರು ಮಾಡಿದೆ.
1997ರಲ್ಲಿ ಬಿಡುಗಡೆಯಾದ ನೇರುಕ್ಕು ನೇರ್ ಚಿತ್ರದ ,ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸೂರ್ಯ ಕಡೆಯದಾಗಿ ಕಮಲಹಾಸನ್ ನಟನೆಯ ವಿಕ್ರಂ ಚಿತ್ರದಲ್ಲಿ ರೋಲೆಕ್ಸ್ ಪಾತ್ರ ಮಾಡುವ ಮೂಲಕ ಮಿಂಚಿದ್ದರು. ಸೂರ್ಯ ನಟನೆಯ ಕಂಗುವಾ ಚಿತ್ರವು ನವೆಂಬರ್ 14ರಂದು ಬಿಡುಗಡೆಯಾಗಲಿದ್ದು, ಸದ್ಯ ಚಿತ್ರತಂಡ ಪ್ರಮೋಷನ್ ಸೇರಿದಂತೆ ಇನ್ನಿತರೆ ಕಾರ್ಯದಲ್ಲಿ ಬ್ಯುಸಿಯಾಗಿದೆ.