ನ್ಯೂಸ್

ಜಾಗತಿಕ ಸೈಬರ್ ಗುಲಾಮಗಿರಿ ಸಿಂಡಿಕೇಟ್ ಬೇಧಿಸಿದ ಸೂರತ್ ಪೊಲೀಸರು; ಮೂವರ ಬಂಧನ| Arrested

Arrested: ಗುಜರಾತ್​ನ ಸೈಬರ್ ಕ್ರೈಮ್​ ಪೊಲೀಸರು ಆಘಾತಕಾರಿ ಸೈಬರ್ ಗುಲಾಮಗಿರಿ ಸಿಂಡಿಕೇಟ್​ ಅನ್ನು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆ ಪಾಕ್​ ಏಜೆಂಟ್ ಸೇರ 12 ಮಾಸ್ಟರ್ ಮೈಂಡ್​ಗಳು ನಡೆಸುತ್ತಿದ್ದ ಜಾಲ ಬೆಳಕಿಗೆ ಬಂದಿದೆ ಎಂದು ಸೋಮವಾರ (ಸೆ. 01) ವರದಿಯಾಗಿದೆ.

ಈ ಸೈಬರ್ ಗುಲಾಮಗಿರಿಗೆ ಗುಜರಾತ್‌ ಸೇರಿದಂತೆ ಭಾರತ ಮತ್ತು ವಿದೇಶಗಳ ಕನಿಷ್ಠ 40 ಯುವಕರನ್ನು ಥೈಲ್ಯಾಂಡ್‌ನಲ್ಲಿ ನಕಲಿ ಉದ್ಯೋಗದ ಆಫರ್‌ ನೀಡಿ ವಂಚಿಸಲಾಗಿದ್ದು, ಗಡಿ ಮೂಲಕ ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡಿ,ಆನ್‌ಲೈನ್ ಹೂಡಿಕೆ ವಂಚನೆಗಳನ್ನು ನಡೆಸುವ ಅಕ್ರಮ ಚೀನೀ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಚೀನಾ  ಮೂಲದ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ನಿಪೇಂದರ್ ಅಲಿಯಾಸ್ ನೀರವ್ ಲವಕುಶ್ ಚೌಧರಿ, ರಾಜ್‌ಕೋಟ್‌ನ ಪ್ರೀತ್ ರಸಿಕ್‌ಲಾಲ್ ಕಮಾನಿ, ಹಾಗೂ ಸೂರತ್‌ನ ವೀಸಾ ಏಜೆಂಟ್ ಆಶಿಶ್ ರಮಣ್‌ಲಾಲ್ ರಾಣಾ ಬಂಧಿತರು. ಮೂವರೂ ಉದ್ಯೋಗ ನೇಮಕಾತಿದಾರರಾಗಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಸಂಬಳದ ಕಂಪ್ಯೂಟರ್ ಉದ್ಯೋಗಗಳ ಭರವಸೆ ನೀಡಿ ಯುವಕರನ್ನು ಆಕರ್ಷಿಸುತ್ತಿದ್ದರು ಎನ್ನಲಾಗಿದೆ.

ವಿದೇಶಿ ಕಾಲ್ ಸೆಂಟರ್‌ಗಳಿಗೆ ಸಂಬಂಧಿಸಿದ ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳನ್ನು ಸೂರತ್ ಸೈಬರ್ ತನಿಖಾಧಿಕಾರಿಗಳು ಪತ್ತೆಹಚ್ಚಿದಾಗ ಈ ದಂಧೆ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ಕೈಗೊಂಡಾಗ ಈ ಸಿಂಡಿಕೇಟ್ ಮಾಹಿತಿ ಹೊರಬಿದ್ದಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಜಾಲದಲ್ಲಿ ಸಿಲುಕಿರುವ ಉದ್ಯೋಗಾಕಾಂಕ್ಷಿಗಳನ್ನು ಪ್ರವಾಸಿ ವೀಸಾಗಳಲ್ಲಿ ಮೊದಲು ಥೈಲ್ಯಾಂಡ್‌ಗೆ ಸಾಗಿಸಲಾಗಿದೆ, ಬಳಿಕ ನದಿಗಳನ್ನು ದಾಟಿ ಮ್ಯಾನ್ಮಾರ್‌ಗೆ ಸ್ಥಳಾಂತರಿಸಿ ಚೀನಾ ಗ್ಯಾಂಗ್​ಗೆ ಹಸ್ತಾಂತರಿಸಲಾಗಿದೆ. ಈ ಜಾಲಕ್ಕೆ ಸಿಕ್ಕ ಯುವಕರನ್ನು ಒತ್ತೆಯಾಳಾಗಿಸಿರಿಕೊಂಡು ಫೇಸ್​ಬುಕ್, ಇನ್​ಸ್ಟಾಗ್ರಾಂ ಐಡಿಗಳನ್ನು ಬಳಸಿಕೊಂಡು ಸೈಬರ್ ವಂಚನೆ ಮಾಡಲು ಒತ್ತಾಯಿಸುತ್ತಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಈ ದಂಧೆ ಕಳೆದ 18 ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿತ್ತು ಎಂದು ಗೊತ್ತಾಗಿದ್ದು, ಚೀನಾದ ಹ್ಯಾಂಡ್ಲರ್​​ಗಳೊಂದಿಗೆ ಕೆಲಸ ಮಾಡ್ತಿದ್ದ ನಿಪೇಂದರ್ ಮ್ಯಾನ್ಮಾರ್​ಗೆ ಸಾಗಿಸಲಾದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 3 ಲಕ್ಷ ರೂಪಾಯಿ ಕಮಿಷನ್ ಪಡೆಯುತ್ತಿದ್ದ, ವೀಸಾ ಏಜೆಂಟ್ ರಾಣಾ ಪ್ರಯಾಣ ದಾಖಲೆಗಳನ್ನ ಸಿದ್ಧ ಪಡಿಸಲು ತಲಾ 37 ಸಾವಿರ ಕಮಿಷನ್ ಪಡೆಯುತ್ತಿದ್ದರು.

ಈ ಕುರಿತು ಮಾತನಾಡಿರುವ ಸೂರತ್ ಡಿಸಿಪಿ ವಿಶಾಖಾ ಜೈನ್, ಚೀನಾದ ಕಂಪನಿಗಳು ಭಾರತ ಮತ್ತು ವಿದೇಶಗಳಲ್ಲಿ ಏಜೆಂಟ್‌ಗಳನ್ನು ಬಳಸಿಕೊಂಡು ಯುವಕರನ್ನು ಸೈಬರ್ ಅಪರಾಧ ಕಾಲ್ ಸೆಂಟರ್‌ಗಳಿಗೆ ಸೆಳೆಯುತ್ತಿವೆ. ಅವರು ಕಮಿಷನ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಾರೆ, ಉದ್ಯೋಗದ ಸುಳ್ಳು ಭರವಸೆಗಳೊಂದಿಗೆ ದುರ್ಬಲರನ್ನು ಬಲೆಗೆ ಬೀಳಿಸುತ್ತಾರೆ. ಈ ದಂಧೆಯಲ್ಲಿ ಕನಿಷ್ಠ 40 ಯುವಕರನ್ನು ಕಳ್ಳಸಾಗಾಣೆ ಮಾಡಲಾಗಿದೆ. 37 ಭಾರತೀಯರು, ಇಬ್ಬರು ಶ್ರೀಲಂಕಾದವರು, ಒಬ್ಬರು ಪಾಕಿಸ್ತಾನದವರು ಎಂದು ಹೇಳಿದ್ದಾರೆ. (ಏಜೆನ್ಸೀಸ್​)