ಜಲ್ಲಿಕಟ್ಟು, ಎತ್ತಿನಗಾಡಿ ಓಟ ಮತ್ತು ಕಂಬಳಕ್ಕೆ ಅನುಮತಿ ನೀಡುವ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳ ತಿದ್ದುಪಡಿ ಕಾಯ್ದೆಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಗ್ರಾಮೀಣ ಜಾನಪದ ವೈವಿಧ್ಯದ ದೃಷ್ಟಿಯಿಂದ ಮಹತ್ವವಾದುದು ಎಂದೇ ಹೇಳಬೇಕು. ಈ ತಿದ್ದುಪಡಿ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅನೇಕ ಅರ್ಜಿಗಳ ಕುರಿತಂತೆ ಐವರು ಸದಸ್ಯರ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.
ಈ ಕಾಯ್ದೆಗಳು ಸಂವಿಧಾನದ 14 ಮತ್ತು 21ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಹಾಗೂ 2014ರಲ್ಲಿ ಜಲ್ಲಿಕಟ್ಟು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಈ ಶಾಸನಗಳಿಗೆ ರಾಷ್ಟ್ರಪತಿಗಳ ಅನುಮೋದನೆ ದೊರಕಿರುವುದನ್ನೂ ಉಲ್ಲೇಖಿಸಿದೆ. ಈ ಕ್ರೀಡೆಗಳಲ್ಲಿ ಪ್ರಾಣಿಗಳ ಮೇಲಿನ ಹಿಂಸೆಯನ್ನು ಕೊನೆಗೊಳಿಸುವ ಅಂಶಗಳನ್ನು ಕಾಯ್ದೆಯಲ್ಲಿ ಪ್ರಸ್ತಾಪಿಸಿದ್ದು, ಈ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಜಲ್ಲಿಕಟ್ಟು ತಮಿಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಹೆಚ್ಚಿನ ವಿವರವಾದ ಧಾರ್ವಿುಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಶ್ಲೇಷಣೆಯ ಅಗತ್ಯವಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗ ಎಂಬ ಶಾಸಕಾಂಗದ ದೃಷ್ಟಿಕೋನವನ್ನು ಪ್ರಶ್ನಿಸುವುದಿಲ್ಲ ಎಂದೂ ಅದು ಹೇಳಿದೆ. ಈ ಗ್ರಾಮೀಣ ಕ್ರೀಡೆಗಳಿಂದ ಪ್ರಾಣಿಹಿಂಸೆ ನಡೆಯುತ್ತದೆ; ತಿದ್ದುಪಡಿ ಕಾನೂನನ್ನು ಊರ್ಜಿತಗೊಳಿಸಿದರೆ ಪ್ರಾಣಿಹಿಂಸೆಯನ್ನು ಶಾಶ್ವತಗೊಳಿಸಿ ದಂತಾಗುತ್ತದೆ ಎಂದು ಅರ್ಜಿ ಸಲ್ಲಿಸಿದ ಸಂಘಸಂಸ್ಥೆಗಳು ಪ್ರತಿಪಾದಿಸಿದ್ದವು. ಸಾಂವಿಧಾನಿಕ ಪೀಠದ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಜಲ್ಲಿಕಟ್ಟು ಪ್ರಾಣಿಗಳು ಮತ್ತು ಮನುಷ್ಯರ ಸಾವುಗಳಿಗೆ ಕಾರಣವಾಗುತ್ತದೆ. ಅಲ್ಲದೆ ಗಾಯಗೊಳ್ಳುತ್ತಾರೆ. ಕ್ರೌರ್ಯವನ್ನು ಒಳಗೊಂಡಿರುವ ಯಾವುದನ್ನೂ ಅನುಮತಿಸಬಾರದು ಎಂದು ಹೇಳಿದ್ದರು.
ಈ ಮೂರನ್ನೂ ಆಯಾ ಪ್ರದೇಶದ ಗ್ರಾಮೀಣ ಕೀಡೆಗಳೆಂದು ಪರಿಗಣಿಸಲಾಗುತ್ತದೆ ಮತ್ತು ಇವು ಶತಮಾನಗಳ ಇತಿಹಾಸ ಹೊಂದಿವೆ. ಈ ಕ್ರೀಡೆಗಳ ಸಂದರ್ಭದಲ್ಲಿ ಪ್ರಾಣಿಹಿಂಸೆ ನಡೆಯುವುದರಿಂದ ಇವನ್ನು ನಿಷೇಧಿಸಬೇಕು ಎಂದು ಕೆಲ ಸಂಘಟನೆಗಳು ಕೂಗೆಬ್ಬಿಸಿದ್ದವು. ನಂತರ ವಿಷಯ ಕೋರ್ಟಿಗೂ ಹೋಯಿತು. ಆದರೆ ಜಲ್ಲಿಕಟ್ಟು, ಎತ್ತಿನ ಬಂಡಿ ಓಟ ಅಥವಾ ಕಂಬಳವನ್ನು ನಿಷೇಧಿಸಿದರೆ, ಜನವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅರಿವಿದ್ದ ಸರ್ಕಾರಗಳು ಈ ನಿಟ್ಟಿನಲ್ಲಿ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ತಂದು, ಮಾನದಂಡಗಳನ್ನು ವಿಧಿಸಿ ಕ್ರೀಡೆಗಳಿಗೆ ಅವಕಾಶ ಮಾಡಿಕೊಟ್ಟಿದ್ದವು. ಈಗ ಈ ತಿದ್ದುಪಡಿ ಕಾನೂನುಗಳ ಸಿಂಧುತ್ವವನ್ನು ಸವೋಚ್ಚ ನ್ಯಾಯಾಲಯ ಎತ್ತಿಹಿಡಿದಂತಾಗಿದೆ. ಹಾಗಂತ, ಈ ಕ್ರೀಡೆಗಳ ಸಂದರ್ಭದಲ್ಲಿ ಸಾವುನೋವುಗಳು ನಡೆದೇ ಇಲ್ಲ ಎಂದಲ್ಲ. ಬೇರೆ ಬೇರೆ ಕಡೆಗಳಲ್ಲಿ ಸಾವುನೋವು ಉಂಟಾಗಿದ್ದಿದೆ. ಈ ಕಾರಣಕ್ಕೆ ಕ್ರೀಡೆಯನ್ನೇ ನಿಷೇಧಿಸಿದರೆ, ಜಾನಪದ ವೈವಿಧ್ಯಕ್ಕೆ ತಡೆಹಾಕಿದಂತಾಗುತ್ತದೆ. ಆಧುನಿಕ
ಭರಾಟೆಯಲ್ಲಿ ನಮ್ಮ ಪಾರಂಪರಿಕ ಕುಲಕಸುಬು, ಆಟಗಳು, ಕಲಾ ವೈವಿಧ್ಯಗಳು ಮರೆಯಾಗುತ್ತಿವೆ ಎಂಬ ಆತಂಕವಿರುವಾಗ, ಅವನ್ನು ಚಾಲ್ತಿಯಲ್ಲಿಡುವುದು ಸಹ ಪ್ರಮುಖವಾದುದು. ಮಾನವರು ಮತ್ತು ಪ್ರಾಣಿಗಳಿಗೆ ತೊಂದರೆಯಾಗದಂತೆ, ಹಿಂಸೆಯಾಗದಂತೆ ಕ್ರೀಡೆಗಳನ್ನು ಆಯೋಜಿಸಬೇಕಾದುದು ಮುಖ್ಯ. ಆಯೋಜಕರು ಹಾಗೂ ಸರ್ಕಾರಗಳು ಈ ದಿಕ್ಕಿನಲ್ಲಿ ಗಮನಹರಿಸಲಿ.