ನ್ಯೂಸ್

NEET-UG ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಅರ್ಜಿ; ಉತ್ತರ ಕೇಳಿ ಎನ್​ಟಿಎಗೆ ಸುಪ್ರೀಂ ನೋಟಿಸ್​​

ನವದೆಹಲಿ: ನೀಟ್​ ಯುಜಿ 2024ರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರೆ ಆರೋಪಗಳ ಸಿಬಿಐ ತನಿಖೆಗೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್​​ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ನೋಟಿಸ್ ಜಾರಿ ಮಾಡಿ ಉತ್ತರ ಕೇಳಿದೆ.

ಇದಷ್ಟೇ ಅಲ್ಲದೆ ವಿವಿಧ ಹೈಕೋರ್ಟ್‌ಗಳಿಂದ ಸುಪ್ರೀಂಕೋರ್ಟ್‌ಗೆ ಅರ್ಜಿಗಳನ್ನು ವರ್ಗಾಯಿಸಲು ಒತ್ತಾಯಿಸಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅರ್ಜಿಯ ಮೇರೆಗೆ ನ್ಯಾಯಾಲಯವು ಎಲ್ಲಾ ಕಕ್ಷಿದಾರರಿಗೆ ನೋಟಿಸ್ ನೀಡಿದೆ. ಜುಲೈ 8ರಂದು ವಿಚಾರಣೆಗೆ ಬರುವಂತೆ ಸೂಚಿಸಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ರಜಾಕಾಲದ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪಗಳ ಆಧಾರದ ಮೇಲೆ ನೀಟ್​​​-ಯುಜಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಲವಾರು ಅರ್ಜಿಗಳು ಹಲವು ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ ಎಂಬ ಎನ್‌ಟಿಎ ಪರ ವಕೀಲರ ವಾದ ಗಮನಿಸಿದ ಪೀಠವು ನೋಟಿಸ್ ನೀಡುತ್ತಿದ್ದೇವೆ ಎಂದು ಹೇಳಿದೆ.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಗುರುವಾರ ಪ್ರಕರಣದ ವಿಚಾರಣೆ ನಡೆಸಿತ್ತು. ಆ ಸಮಯದಲ್ಲಿ ಎನ್​​ಟಿಎ 1 ಸಾವಿರದ 563 ವಿದ್ಯಾರ್ಥಿಗಳ ಅಂಕಪಟ್ಟಿ ರದ್ದುಗೊಳಿಸಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು. ನ್ಯಾಯಾಲಯದ ಆದೇಶದ ನಂತರ ಇದೀಗ ಗ್ರೇಸ್ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜೂನ್​ 23ರಂದು ಮರುಪರೀಕ್ಷೆ ನಡೆಯಲಿದೆ. ಜೂನ್ 30 ರಂದು ಫಲಿತಾಂಶ ಬರಲಿದ್ದು, ಜುಲೈ 6ರಿಂದ ಕೌನ್ಸೆಲಿಂಗ್ ನಡೆಯಲಿದೆ. (ಏಜೆನ್ಸೀಸ್​​)