ನವದೆಹಲಿ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಸದ್ಯ ರೆಗ್ಯೂಲರ್ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ (Darshan) ಸದ್ಯ ಫ್ಯಾಮಿಲಿಯೊಂದಿಗೆ ಕಾಲ ಕಳೆಯುತ್ತಿದ್ದು, ಈಚೆಗೆ ಕುಟುಂಬಸ್ಥರೊಂದಿಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾವನ್ನು ವೀಕ್ಷಿಸಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13ರಂದು ಹೈಕೋರ್ಟ್ ನಟ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅದರಂತೆ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ರದ್ದುಪಡಿಸಲು ನಿರಾಕರಿಸಿತು. ಆದರೆ ಜಾಮೀನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಕೊಂಡಿತು. ಈ ವೇಳೆ ಹೈಕೋರ್ಟ್ ವಿಸ್ತೃತ ಆದೇಶ ಪ್ರಕಟಿಸಿ ಆರೋಪಿಗಳಿಗೆ ಜಾಮೀನು ನೀಡಿದೆ. ಮೆರಿಟ್ ಮೇಲೆ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಈ ಅರ್ಜಿಯ ವಿಚಾರಣೆಗೆ ಆರೋಪಿಗಳ ವಾದವನ್ನು ಕೇಳಬೇಕಾಗುತ್ತದೆ ಎಂದು ಹೇಳಿ ನಟ ದರ್ಶನ್ (Darshan) ಸೇರಿದಂತೆ ಪ್ರಕರಣದ ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಗ್ಯೂಲರ್ ಬೇಲ್ ಮೇಲೆ ಹೊರಬಂದಿರುವ ನಟ ದರ್ಶನ್ ಸದ್ಯ ಡೆವಿಲ್ ಸಿನಿಮಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರಿಗೆ ಶೀಘ್ರದಲ್ಲೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.