ನವದೆಹಲಿ : ಕೋವಾಕ್ಸಿನ್ ಕರೊನಾ ಲಸಿಕೆಯನ್ನು ಮೇ 1 ರಿಂದಲೇ ಕರ್ನಾಟಕ ಸೇರಿದಂತೆ 18 ರಾಜ್ಯಗಳ ಸರ್ಕಾರಗಳಿಗೆ ನೇರವಾಗಿ ಪೂರೈಸುತ್ತಿರುವುದಾಗಿ ಉತ್ಪಾದಕ ಭಾರತ್ ಬಯೋಟೆಕ್ ಹೇಳಿದೆ. ಲಸಿಕಾ ಅಭಿಯಾನದ ಯಶಸ್ಸಿಗಾಗಿ ನಿಯಮಿತ ಪೂರೈಕೆಯನ್ನು ಮುಂದುವರಿಸುವುದಾಗಿ ಹೈದರಾಬಾದ್ ಮೂಲದ ಕಂಪೆನಿ ಭರವಸೆ ನೀಡಿದೆ.
ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್‌ಗಡ, ದೆಹಲಿ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ಲಸಿಕೆ ಪೂರೈಸಿರುವುದಾಗಿ ಬಯೋಟೆಕ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. 'ನೀವೂ, ನಿಮ್ಮ ಪ್ರೀತಿಪಾತ್ರರೂ ಲಸಿಕೆ ಪಡೆಯಿರಿ' ಎಂದು ಜನರಿಗೆ ಹೇಳಿದೆ.
ಕೇಂದ್ರ ಸರ್ಕಾರದಿಂದ ಲಭ್ಯವಾಗಿರುವ ಹಂಚಿಕೆಯ ಮಾಹಿತಿಗೆ ಅನುಸಾರವಾಗಿ ಲಸಿಕೆಯನ್ನು ನೇರವಾಗಿ ಸರಬರಾಜು ಮಾಡಲು ಆರಂಭಿಸಲಾಗಿದೆ ಎಂದು ಕಂಪೆನಿಯ ಜಂಟಿ ಎಂಡಿ ಸುಚಿತ್ರ ಎಲ್ಲಾ ಈ ಮುನ್ನ ತಿಳಿಸಿದ್ದರು. ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ಲಸಿಕೆಯ ಬೆಲೆಯನ್ನು ಡೋಸ್ಗೆ 400 ರೂಪಾಯಿಯಂತೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಖರೀದಿ ದರವು ಡೋಸ್ಗೆ 150 ರೂ.ಗಳಾಗಿವೆ. (ಏಜೆನ್ಸೀಸ್)