ನ್ಯೂಸ್

ಪೂರಕ ಪರೀಕ್ಷೆ ಬರೆದರೂ ಪ್ರಥಮವೆಂದೇ ಪರಿಗಣನೆ

malli

ದೇವರಾಜ್ ಎಲ್.

ಬೆಂಗಳೂರು: ಕರೊನಾ ಸೋಂಕಿತ ವಿದ್ಯಾರ್ಥಿಗಳು ಮಾತ್ರವಲ್ಲ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರಾಗುವ ವಿದ್ಯಾರ್ಥಿಗಳಿಗೂ ಪೂರಕ ಪರೀಕ್ಷೆ ಯಲ್ಲಿ ಅವಕಾಶ ಕಲ್ಪಿಸುವ ಮುಖಾಂತರ ‘ಪ್ರಥಮ ಅವಕಾಶ’ ಎಂದೇ ಪರಿಗಣಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಬಹುತೇಕ ಪಾಲಕರು ಮಕ್ಕಳನ್ನು ಪರೀಕ್ಷೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಲ್ಲೂ ಪರೀಕ್ಷೆ ಬಗ್ಗೆ ಭಯದ ವಾತಾವರಣ ಸೃಷ್ಟಿಯಾಗಿರುವುದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಅಂತಹವರಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವುದು ಸೂಕ್ತ ಎಂದು ಅಧಿಕಾರಿಗಳು ಆಲೋಚಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆದಿದ್ದು, ವಿಚಾರ ಬಹಿರಂಗಪಡಿಸಿದರೆ ಬಹುತೇಕ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿಯೇ ಗೈರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷೆಗೆ ಗೈರಾದವರವನ್ನು ಪುನರಾವರ್ತಿತ ಶಾಲಾ ಅಭ್ಯರ್ಥಿ, ಪುನರಾವರ್ತಿತ ಖಾಸಗಿ ಅಭ್ಯರ್ಥಿ ಎಂದು ವರ್ಗೀಕರಿಸುವ ಬದಲು ಖಾಸಗಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಗೈರಾದವರನ್ನು ನೇರವಾಗಿ ‘ಪ್ರಥಮ ಅವಕಾಶ’ದ ಅಭ್ಯರ್ಥಿಗಳು ಎಂದು ಪರಿಗಣಿಸಲು ಇಲಾಖೆ ಚಿಂತಿಸಿದೆ.

ಪ್ರಾತ್ಯಕ್ಷಿಕೆಯ ವಿಡಿಯೋವನ್ನು ಈಗಾಗಲೇ ಮುಖ್ಯೋಪಾಧ್ಯಾಯರಿಗೆ ಕಳುಹಿಸಲಾಗಿದೆ. ಮಂಡಳಿಯು ಸುರಕ್ಷತಾ ಕ್ರಮ ಅನುಸರಿಸಿ ಪರೀಕ್ಷೆ ನಡೆಸಲು ಸಿದ್ಧವಾಗಿದೆ. | ವಿ.ಸುಮಂಗಲಾ ನಿರ್ದೇಶಕರು, ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

ಪ್ರಾಯೋಗಿಕ ಮಾದರಿ: ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಬೇಕಾಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶದಿಂದ ಪ್ರಾಯೋಗಿಕ ಪರೀಕ್ಷೆ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿ ಮಾಸ್ಕ್ ಧರಿಸಿ, ಸಾಲಿನಲ್ಲಿ ಬಂದು ಪರೀಕ್ಷಾ ಕೇಂದ್ರ ಮುಂಭಾಗದಲ್ಲಿರುವ ಆರೋಗ್ಯ ತಪಾಸಣಾ ಕೇಂದ್ರಕ್ಕೆ ತೆರಳಿ ಥರ್ಮಲ್ ಸ್ಕಾ್ಯನಿಂಗ್​ಗೆ ಒಳಪಡಬೇಕು. ಆನಂತರ ಕೈಗೆ ಸ್ಯಾನಿಟೈಸರ್ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗಬೇಕು. ಒಂದು ಡೆಸ್ಕ್​ಗೆ ಇಬ್ಬರಂತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಕಳುಹಿಸಿಕೊಡಬೇಕು. ಬಹುತೇಕ ಶಾಲೆಗಳು ಈ ಪ್ರಾತ್ಯಕ್ಷಿಕೆಯನ್ನು ಮಾಡಿವೆ.

ಪ್ರವೇಶ ಪತ್ರ ಪ್ರಕಟ: ನೂತನ ವೇಳಾಪಟ್ಟಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರವನ್ನು ಪ್ರಕಟಿಸಲಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರು ಮಂಡಳಿ ವೆಬ್​ಸೈಟ್​ನಲ್ಲಿ ಡೌನ್​ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.