38 ಕಿ.ಮೀ ಓಡಿದ ಶ್ವಾನ 
ನ್ಯೂಸ್

38 ಕಿ.ಮೀ ಓಡಿದ ಸೂಪರ್ ಡಾಗ್! ‘ಪಿಲ್ಲು ಗಾಗಿನ್ಸ್’ ಈಗ ಸೋಷಿಯಲ್ ಮೀಡಿಯಾ ಸ್ಟಾರ್ | Dog Runs 38 Km

ಕಾನ್ಪುರದಲ್ಲಿ ಓಟಗಾರರ ಜತೆ ಬರೋಬ್ಬರಿ 38 ಕಿ.ಮೀ ಓಡಿದ ಶ್ವಾನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಪಿಲ್ಲು ಗಾಗಿನ್ಸ್’ ಎಂದು ಕರೆಯಲ್ಪಟ್ಟ ಈ ಶ್ವಾನದ ಉತ್ಸಾಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Viral Dog: ಓಟಗಾರರ ಜತೆ ಬರೋಬ್ಬರಿ 38 ಕಿ.ಮೀ ಓಡಿದ ಶ್ವಾನವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಾನ್ಪುರದ ಓಟಗಾರ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪ್ರಥಮ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಮುದ್ದು ಶ್ವಾನಕ್ಕೆ ‘ಪಿಲ್ಲು ಗಾಗಿನ್ಸ್’ ಎಂದು ಹೆಸರಿಟ್ಟಿದ್ದಾರೆ.

ಪ್ರಥಮ್ ಹೇಳುವ ಪ್ರಕಾರ, ಅವರು ಒಟ್ಟು 43 ಕಿ.ಮೀ ಓಡಿದ್ದಾರೆ. ಆದರೆ ಪಿಲ್ಲು ಸುಮಾರು 38 ಕಿ.ಮೀ ವರೆಗೆ ಓಟಗಾರರ ಜತೆ ಓಡಿದೆ. ಓಟದ ಮಧ್ಯೆ ಓಟಗಾರರು ವಿಶ್ರಾಂತಿಗೆ ನಿಂತಾಗ ಪಿಲ್ಲು ಕೂಡ ಅವರ ಜೊತೆ ನಿಂತು ರೆಸ್ಟ್ ಮಾಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಅರ್ಧ ಮ್ಯಾರಥಾನ್ ದಾಟಿದ್ರೂ ಓಟ ನಿಲ್ಲಿಸದ ಪಿಲ್ಲು

ಮೊದಲಿಗೆ ಓಟಗಾರರು 21 ಕಿ.ಮೀ ಆದ್ಮೇಲೆ ಪಿಲ್ಲು ಸುಸ್ತಾಗಿ ನಿಂತುಬಿಡಬಹುದು ಅಂತ ಅಂದುಕೊಂಡಿದ್ದರು. ಆಗ ತಾವೂ ಅಲ್ಲಿಂದ ಆಟೋ ಮಾಡಿಕೊಂಡು ಮನೆಗೆ ಹೋಗೋಣ ಅಂತ ಪ್ಲ್ಯಾನ್ ಮಾಡಿದ್ದರು. ಆದ್ರೆ ಪಿಲ್ಲು ಮಾತ್ರ 21 ಕಿ.ಮೀ ದಾಟಿದ್ರೂ ಓಡೋದು ನಿಲ್ಲಿಸಲಿಲ್ಲ. ಅದರ ಉತ್ಸಾಹ ನೋಡಿ ಓಟಗಾರರಿಗೂ ಇನ್ನಷ್ಟು ಓಡೋ ಹುಮ್ಮಸ್ಸು ಬಂದಿದೆ. ಕೊನೆಗೆ ಪಿಲ್ಲುನೇ ಅವರಿಗೆ ‘ಸೈಲೆಂಟ್ ಇನ್‌ಸ್ಪಿರೇಷನ್’ ಆಗಿ, ಫುಲ್ ಮ್ಯಾರಥಾನ್ ಮುಗಿಸುವಂತೆ ಪ್ರೇರೇಪಿಸಿದೆ.

ಓಟದ ಮಧ್ಯೆ ಓಟಗಾರರು ಪಿಲ್ಲುಗೆ ನೀರು ಕೊಡುತ್ತಾ, ಬೇಕಾದಾಗ ರೆಸ್ಟ್ ಮಾಡಿಸುತ್ತಾ ನೋಡಿಕೊಂಡಿದ್ದಾರೆ. ಪಿಲ್ಲು ಕೂಡ ಓಟದ ವೇಗಕ್ಕೆ ತಕ್ಕಂತೆ ಅವರ ಜತೆ ಓಡುತ್ತಲೇ ಇತ್ತು. ಪ್ರಥಮ್ ಹಂಚಿಕೊಂಡ ಪೋಸ್ಟ್‌ನಲ್ಲಿ, ಪಿಲ್ಲು ಒಂದೇ ಸಲವೂ ಓಟ ನಿಲ್ಲಿಸದೇ 38 ಕಿ.ಮೀ ಓಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯೆ ನೀರು ಕುಡಿಯಲು ಬ್ರೇಕ್ ತೆಗೆದುಕೊಂಡರೂ, ಮತ್ತೆ ಓಟಗಾರರ ಜತೆ ಸೇರಿಕೊಂಡು ಓಡುತ್ತಿತ್ತು ಎಂದು ಹೇಳಿದ್ದಾರೆ.

ಪಿಲ್ಲುಗೆ ಫಿದಾ ಆದ ನೆಟ್ಟಿಗರು

ಪಿಲ್ಲುವಿನ ಈ ಓಟದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅದರ ಎನರ್ಜಿ, ನಿಷ್ಠೆ ಮತ್ತು ಓಡುವ ಉತ್ಸಾಹಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ‘ಅದಕ್ಕೆ ಏನಾದ್ರೂ ಊಟ ಕೊಟ್ಟು, ಮತ್ತೆ ಅದರ ಪ್ರದೇಶಕ್ಕೆ ಸುರಕ್ಷಿತವಾಗಿ ಕಳುಹಿಸಿದ್ದೀರಿ ಅಂತ ಭಾವಿಸುತ್ತೇನೆ. ತುಂಬಾ ಮುದ್ದಾಗಿದೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಬೆಸ್ಟ್ ರನ್ನಿಂಗ್ ಪಾರ್ಟ್ನರ್

ಮತ್ತೊಬ್ಬರು ‘ಪಿಲ್ಲು ಗಾಗಿನ್ಸ್ ಇನ್ನೂ ಹೆಚ್ಚು ಫೇಮಸ್ ಆಗಬೇಕು’ ಎಂದು ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗ, ‘ಇದೇ ಬೆಸ್ಟ್ ರನ್ನಿಂಗ್ ಪಾರ್ಟ್ನರ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪಿಲ್ಲುವನ್ನು ದತ್ತು ಪಡೆಯುವಂತೆ ಪ್ರಥಮ್‌ಗೆ ಮನವಿ ಮಾಡಿದ್ದಾರೆ. ‘ಪಿಲ್ಲುವನ್ನು ದತ್ತು ತೆಗೆದುಕೊಳ್ಳಿ. ಇಷ್ಟು ಪ್ರೀತಿ ಮತ್ತು ನಿಷ್ಠೆ ಮತ್ತೆ ಸಿಗೋದು ಕಷ್ಟ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 2 ಕೋಟಿ ರೂ. ಪಾವತಿಸಿ, ಇಲ್ಲವಾದ್ರೆ ಕಠಿಣ ಕ್ರಮ: ರಾಜಪಾಲ್ ಯಾದವ್‌ಗೆ ಸುಪ್ರೀಂ ಖಡಕ್ ವಾರ್ನ್​ | Rajpal cheque bounce case

ಓಟ ಮುಗಿದ ಬಳಿಕ ಪಿಲ್ಲು ಸುರಕ್ಷಿತವಾಗಿದೆಯೇ, ಅದನ್ನು ಹೇಗೆ ನೋಡಿಕೊಂಡರು ಎಂಬ ಬಗ್ಗೆಯೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಥಮ್ ತಮ್ಮ ಪೋಸ್ಟ್‌ನಲ್ಲೇ ಸ್ಪಷ್ಟನೆ ನೀಡಿದ್ದಾರೆ.