2 ಕೋಟಿ ರೂ. ಪಾವತಿಸಿ, ಇಲ್ಲವಾದ್ರೆ ಕಠಿಣ ಕ್ರಮ: ರಾಜಪಾಲ್ ಯಾದವ್‌ಗೆ ಸುಪ್ರೀಂ ಖಡಕ್ ವಾರ್ನ್​ | Rajpal cheque bounce case

ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ರಾಜಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ 2 ಕೋಟಿ ರೂ. ಪಾವತಿಸಲು ಅಕ್ಟೋಬರ್ 13ರವರೆಗೆ ಗಡುವು ನೀಡಿದೆ. ಈ ನಡುವೆ ಯಾದವ್ 1.15 ಕೋಟಿ ರೂ. ಮೊತ್ತದ ಡಿಮ್ಯಾಂಡ್ ಡ್ರಾಫ್ಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Rajpal Yadav cheque bounce case
ರಾಜಪಾಲ್ ಯಾದವ್‌ ವಿರುದ್ಧ ಚೆಕ್ ಬೌನ್ಸ್ ಕೇಸ್
Published on: 

Rajpal Yadav: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಬಾಕಿ ಹಣದಲ್ಲಿ 2 ಕೋಟಿ ರೂ. ಪಾವತಿಸಲು ಅಕ್ಟೋಬರ್ 13ರವರೆಗೆ ಗಡುವು ನೀಡಿರುವ ಕೋರ್ಟ್, ಹಣ ಪಾವತಿಸಿದ ಬಳಿಕ ದೆಹಲಿ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧದ ಯಾದವ್ ಅವರ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಖುದ್ದು ಹಾಜರಾದ ರಾಜಪಾಲ್ ಯಾದವ್, 1.15 ಕೋಟಿ ರೂ. ಮೊತ್ತದ ಡಿಮ್ಯಾಂಡ್ ಡ್ರಾಫ್ಟ್‌ನ್ನು ಸಲ್ಲಿಸಿದರು. ಉಳಿದ 85 ಲಕ್ಷ ರೂ. ಹಣವನ್ನು ತಮ್ಮ ಆಸ್ತಿ ಖರೀದಿಸಿರುವ ವ್ಯಕ್ತಿ ಪಾವತಿಸಲಿದ್ದಾರೆ ಎಂದು ಅವರ ವಕೀಲರು ಕೋರ್ಟ್‌ಗೆ ತಿಳಿಸಿದರು.

ಕಾನೂನನ್ನು ಹೀಗೆ ಬಳಸಿಕೊಳ್ಳಬಾರದು

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ, ಹಣ ಪಾವತಿ ವಿಚಾರದಲ್ಲಿ ರಾಜಪಾಲ್ ಯಾದವ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. ‘ಕಾನೂನನ್ನು ಹೀಗೆ ಬಳಸಿಕೊಳ್ಳಬಾರದು’ ಎಂದು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಎಚ್ಚರಿಸಿದರು. ಅಗತ್ಯ ಬಿದ್ದರೆ ಅವರ ಶಿಕ್ಷೆಯನ್ನು ಹೆಚ್ಚಿಸುವ ಬಗ್ಗೆಯೂ ಕೋರ್ಟ್ ಸೂಚನೆ ನೀಡಿತು.

5 ಕೋಟಿ ರೂ. ಸಾಲದಿಂದ ಶುರುವಾದ ಪ್ರಕರಣ

2010ರಲ್ಲಿ ಅಟಾ ಪಟಾ ಲಾಪತಾ ಸಿನಿಮಾ ನಿರ್ಮಾಣಕ್ಕಾಗಿ ರಾಜಪಾಲ್ ಯಾದವ್ ಮುರಳಿ ಪ್ರಾಜೆಕ್ಟ್ಸ್‌ನಿಂದ ಸುಮಾರು 5 ಕೋಟಿ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಗೆ ನೀಡಿದ್ದ ಏಳು ಚೆಕ್‌ಗಳು ಬೌನ್ಸ್ ಆದ ಬಳಿಕ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ರಾಜಪಾಲ್ ಯಾದವ್‌ಗೆ ಮೂರು ತಿಂಗಳ ಶಿಕ್ಷೆ ವಿಧಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಅಕ್ಟೋಬರ್ 5ರಂದು 2 ಕೋಟಿ ರೂ. ಠೇವಣಿ ಇಡುವಂತೆ ಸೂಚಿಸಿತ್ತು. ಆದರೆ, ಈ ಹಿಂದೆ ನೀಡಿದ್ದ ಗಡುವಿನಲ್ಲೂ ಅವರು ಹಣ ಪಾವತಿಸಿರಲಿಲ್ಲ.

‘ನಿಮ್ಮ ಹಣವೂ ನಾಪತ್ತೆಯಾಗಿದೆ’ ಎಂದ ಸಿಜೆಐ

ವಿಚಾರಣೆ ಬಳಿಕ ರಾಜಪಾಲ್ ಯಾದವ್, ಅಟಾ ಪಟಾ ಲಾಪತಾ ಸಿನಿಮಾದಿಂದ ತಮಗೆ ಉಂಟಾದ ನಷ್ಟದ ಬಗ್ಗೆ ಕೋರ್ಟ್‌ಗೆ ತಿಳಿಸಿದರು. ಸಿನಿಮಾದಿಂದ ಸುಮಾರು 200ರಿಂದ 250 ಕೋಟಿ ರೂ. ನಷ್ಟವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಯುದ್ಧಕ್ಕೆ ಹೋಗ್ತಿದ್ದೀಯಾ ಅಂತ ಅಮ್ಮ ಕಣ್ಣೀರಿಟ್ಟರು’: ಅಭಿಜಿತ್ ದಿಪ್ಕೆ ಭಾವುಕ ಪೋಸ್ಟ್ | Abhijeet Dipke

ಇದಕ್ಕೆ ಸಿನಿಮಾ ಹೆಸರನ್ನೇ ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, “ನಿಮ್ಮ ಸಿನಿಮಾದಂತೆ ನಿಮ್ಮ ಹಣವೂ ಅಟಾ ಪಟಾ ಲಾಪತಾ, ಗಾಯಬ್” ಎಂದು ತಮಾಷೆಯಾಗಿ ಹೇಳಿದರು. ರಾಜಪಾಲ್ ಯಾದವ್ ತಮ್ಮ ಜೈಲು ವಾಸ ಸೇರಿದಂತೆ ತಾವು ಎದುರಿಸಿದ ಕಷ್ಟಗಳ ಬಗ್ಗೆಯೂ ಕೋರ್ಟ್ ಮುಂದೆ ಮಾತನಾಡಿದರು. ಈ ವೇಳೆ ಸಿಜೆಐ, “ಒಳ್ಳೆಯ ಸಿನಿಮಾ ಮಾಡಿ, ಜನರನ್ನು ರಂಜಿಸಿ” ಎಂದು ಸಲಹೆ ನೀಡಿದರು. (ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net