ಸುಮಲತಾ ಅಂಬರೀಷ್​ 
ನ್ಯೂಸ್

ಬಿಜೆಪಿಗೆ ಸಂಪೂರ್ಣ ಬೆಂಬಲ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಕೈಕೊಟ್ಟ ಸುಮಲತಾ!

ಮಂಡ್ಯ: ಸ್ವಾಭಿಮಾನಿ ಸಂಸದೆ ಎಂದು ಹೇಳಿಕೊಳ್ಳುವ ಸುಮಲತಾ ಅಂಬರೀಷ್​ ಅವರ ದ್ವಂದ್ವ ನಿಲುವು ಇದೀಗ ಬಯಲಾಗಿದೆ. ಬಿಜೆಪಿಗೆ ಬೆಂಬಲ ಅಂತ ಹೇಳಿದ್ದರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿಲ್ಲ. ಋಣ ಸಂದಾಯ ನೆಪದಲ್ಲಿ ಬಿಜೆಪಿ ಅಭ್ಯರ್ಥಿಗೆ ರೆಬೆಲ್​ ಲೇಡಿ ಕೈ ಕೊಟ್ಟಿದ್ದಾರೆ.

ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲು ರೈತ ಸಂಘದ ಅಭ್ಯರ್ಥಿ ಅಭ್ಯರ್ಥಿ ದರ್ಶನ್ ಪುಟ್ಟಣಯ್ಯಗೆ ಸುಮಲತಾ ಬೆಂಬಲ ಘೋಷಣೆ ಮಾಡಿದ್ದಾರೆ. ಇತ್ತ ಸುಮಲತಾ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿಗೆ ಶಾಕ್ ಆಗಿದೆ.

ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್​ಗೆ ಕೊನೆಯ ಕ್ಷಣದಲ್ಲಿ ಸುಮಲತಾ ಅವರು ಕೈ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಹಾಗೂ ರೈತ ಸಂಘ ಬಹಿರಂಗವಾಗಿ ಬೆಂಬಲ ನೀಡಿತ್ತು. ಹಿಂಬಾಗಿಲಿನಿಂದ ಸುಮಲತಾ ಗೆಲುವಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಸಹ ಶ್ರಮಿಸಿದ್ದರು.

ಬಿಜೆಪಿಗೆ ತಿರುಮಂತ್ರ

ಆದರೆ, ಇತ್ತೀಚೆಗೆ ಸುಮಲತಾ ಅವರು ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ ಎಂದು ಘೋಷಿಸಿದ್ದರು. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ ಎಂದು ಎಲ್ಲ ಕಡೆ ಹೇಳಿಕೊಂಡು ಬರುತ್ತಿದ್ದರು. ಆದರೀಗ ಬಿಜೆಪಿಗೆ ತಿರುಮಂತ್ರ ಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಹೇಳುತ್ತಿದ್ದಾರೆ.

ಕಾರ್ಯಕರ್ತರ ಆಕ್ರೋಶ

ಸುಮಲತಾರ ಈ ನಡೆಯಿಂದ ಮೇಲುಕೋಟೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುಮಲತಾಗೆ ನಾವು ಬೆಂಬಲ ಕೊಟ್ಟಿರಲಿಲ್ವ ಎಂದು ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)