ನ್ಯೂಸ್

ವಿತ್ತ ಸಚಿವೆಗೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್; ಪ್ರಧಾನಿ ಮೋದಿ & ತೆರಿಗೆ ಪಾವತಿ ಕುರಿತು ಲೆಟರ್​ನಲ್ಲಿ ಉಲ್ಲೇಖ | Sukesh Chandrashekar

ನವದೆಹಲಿ: ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ 2015ರಲ್ಲಿ ಬಂಧಿತರಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್( Sukesh Chandrashekar) ಅವರಿಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಪತ್ರದಲ್ಲಿ ತನ್ನ ಘೋಷಿತ ವಿದೇಶಿ ಆದಾಯ 7,640 ಕೋಟಿ ರೂಪಾಯಿಗೆ 2024ಕ್ಕೆ ಸಂಬಂಧಿಸಿದಂತೆ ಸರ್ಕಾರಿ ತೆರಿಗೆ ಯೋಜನೆಯಡಿ ಸೇರಿಸಲು ಮನವಿ ಮಾಡಿದ್ದಾರೆ.

ಸುಕೇಶ್ ಅವರು ತಮ್ಮ ಸಾಗರೋತ್ತರ ವ್ಯವಹಾರಗಳಾದ ಎಲ್ಎಸ್ ಹೋಲ್ಡಿಂಗ್ಸ್ ಇಂಟರ್​ನ್ಯಾಷನಲ್, ಸ್ಪೀಡ್ ಗೇಮಿಂಗ್ ಕಾರ್ಪೊರೇಷನ್ ನೆವಾಡಾ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಅಮೆರಿಕ, ಸ್ಪೇನ್, ಬ್ರಿಟನ್, ದುಬೈ ಮತ್ತು ಹಾಂಗ್​​ಕಾಂಗ್‌ನಲ್ಲಿ ತಮ್ಮ ವ್ಯವಹಾರ ಸಕ್ರಿಯವಾಗಿದೆ ಎಂದು ಸುಕೇಶ್ ಹೇಳಿದ್ದಾರೆ. ಭಾರತದಲ್ಲಿ ಬಾಕಿ ಉಳಿದಿರುವ ಎಲ್ಲಾ ಆದಾಯ ತೆರಿಗೆ ವಸೂಲಾತಿ ಕ್ರಮಗಳು ಮತ್ತು ಮೇಲ್ಮನವಿಗಳನ್ನು ಇತ್ಯರ್ಥಗೊಳಿಸಲು ಸಿದ್ಧ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿ ಅವರನ್ನು ಹೊಗಳಿದ ಸುಕೇಶ್​​​

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ಪಿಎಂ ಮೋದಿ ನೇತೃತ್ವದಲ್ಲಿ ತನ್ನ ವಿದೇಶಿ ಆದಾಯದ ಮೇಲೆ ತೆರಿಗೆ ಪಾವತಿಸುವ ಮೂಲಕ ಮತ್ತು ಅದನ್ನು ದೇಶದಲ್ಲಿ ಹೂಡಿಕೆ ಮಾಡುವ ಮೂಲಕ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಮುಂದೆ ನಾನು ನನ್ನ ವಿದೇಶಿ ಆದಾಯದ ಮೇಲೆ ಭಾರತೀಯ ತೆರಿಗೆಯನ್ನು ಸ್ವಯಂಪ್ರೇರಿತವಾಗಿ ಪಾವತಿಸುತ್ತೇನೆ ಎಂದು ತಿಳಿಸಿದ್ದಾರೆ.

ಸುಕೇಶ್ ಅವರು ತಮ್ಮ ವಿದೇಶಿ ಆದಾಯವನ್ನು ಇಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಪತ್ರದಲ್ಲಿ ಬರೆದಿದ್ದಾರೆ. ವಂಚನೆಯ ಆರೋಪ ಹೊತ್ತಿರುವ ಸುಕೇಶ್ 2024ನೇ ಸಾಲಿಗೆ ನನ್ನ ಕಾನೂನುಬದ್ಧ ವಿದೇಶಿ ಆದಾಯ 7,640 ಕೋಟಿ ರೂಪಾಯಿ ಎಂದು ಘೋಷಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೆ ತ್ವರಿತ ಆಧಾರದ ಮೇಲೆ ಭಾರತೀಯ ತೆರಿಗೆ ಕಾನೂನುಗಳ ಪ್ರಕಾರ ಸೂಕ್ತ ತೆರಿಗೆಗಳನ್ನು ಪಾವತಿಸಲು ಬಯಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​​)