Damascus Church: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 20 ಜನರು ಮೃತಪಟ್ಟು, 63 ಜನರು ಗಾಯಗೊಂಡಿರುವ ದುರಂತ ಸಿರಿಯಾದ ರಾಜಧಾನಿಯಾದ ಡಮಾಸ್ಕಸ್ನ ಚರ್ಚ್‌ನಲ್ಲಿ ಭಾನುವಾರ(ಜೂ.22) ನಡೆದಿದೆ.
ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಭಾನುವಾರ ಸಂಜೆ ಪ್ರಾರ್ಥನೆ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿ ನಂತರ ಸ್ಫೋಟಕ ಉಡುಪನ್ನು ಸ್ಫೋಟಿಸಿದ್ದಾನೆ ಎಂದು ಸಿರಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇರಾನ್ ಪರಮಾಣು ಸ್ಥಾವರಗಳ ಮೇಲೆ ಟ್ರಂಪ್ ಬಾಂಬ್: ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಸರ್ವೋಚ್ಚ ನಾಯಕ ಖಮೇನಿ | Iran
ದಾಳಿಕೋರನು ಜಿಹಾದಿ ಗುಂಪು ಇಸ್ಲಾಮಿಕ್ ಸ್ಟೇಟ್ (IS)ಗೆ ಸೇರಿದವನು ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ಚರ್ಚ್‌ನಲ್ಲಿ ನಡೆದ ಭಯಾನಕ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. 'ನಾವು ಚರ್ಚ್‌ಗೆ ಹೋದಾಗ, ದ್ವಾರವು ನಾಗರಿಕರು, ಯುವಕರು ಮತ್ತು ವೃದ್ಧರ ದೇಹದ ಭಾಗಗಳಿಂದ ತುಂಬಿತ್ತು' ಎಂದು 35 ವರ್ಷದ ಮೆಲೇಷಿಯಸ್ ಶತಾಹಾ ಎಂಬುವವರು ಹೇಳಿದ್ದಾರೆ.
ನಾನು ಚರ್ಚ್‌ನ ದ್ವಾರದಲ್ಲಿದ್ದೆ. ದುಷ್ಕರ್ಮಿ ಗುಂಡು ಹಾರಿಸುವುದನ್ನು ನೋಡಿದೆ ಎಂದು ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ಎಲೀ ಟ್ಯಾಟ್ರೋಸ್ ಹೇಳಿದ್ದಾರೆ. ನನ್ನ ಮಗ ಒಳಗೆ ಹಾರಿ ಅವನನ್ನು ತಡೆಯಲು ಬಯಸಿದ. ಆದರೆ ನಾನು ಅವನನ್ನು ತಡೆದೆ. ನಮ್ಮ ಮುಂದೆಯೇ ಬೆಂಕಿ ಆವರಿಸುತ್ತಿತ್ತು. ಜನ ಎಲ್ಲೆಡೆ ಓಡಲು ಆರಂಭಿಸಿದರು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್(2024)ನಲ್ಲಿ ಇಸ್ಲಾಮಿಸ್ಟ್ ನೇತೃತ್ವದ ಪಡೆಗಳು ದೀರ್ಘಕಾಲದ ಆಡಳಿತಗಾರ ಬಶರ್ ಅಲ್-ಅಸ್ಸಾದ್ ನನ್ನು ಪದಚ್ಯುತಗೊಳಿಸಿದ ಬಳಿಕ ರಾಜಧಾನಿ ಡಮಾಸ್ಕಸ್‌ನಲ್ಲಿ ನಡೆದ ಮೊದಲ ಆತ್ಮಾಹುತಿ ಬಾಂಬ್ ದಾಳಿ ಇದಾಗಿದೆ.
ಭದ್ರತಾ ಪಡೆಗಳು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದು, ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)