Peshawar: ಪಾಕಿಸ್ತಾನದ ವಾಯುವ್ಯ ಖೈಬರ್ ಪ್ರಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ (ಜೂ.28) ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 13 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜೀರಿಸ್ತಾನ್ ಜಿಲ್ಲೆಯ ಖಡ್ಡಿ ಪ್ರದೇಶದಲ್ಲಿ ಇಂದು ಮುಂಜಾನೆ ಬಾಂಬ್ ನಿಷ್ಕ್ರಿಯ ಘಟಕಕ್ಕೆ ಸೇರಿದ ಮೈನ್-ರೆಸಿಸ್ಟೆಂಟ್ ಆಂಬುಶ್ ಪ್ರೊಟೆಸ್ಟೆಡ್ (ಎಂಆರ್‌ಎಪಿ) ವಾಹನಕ್ಕೆ ಆತ್ಮಹತ್ಯಾ ಬಾಂಬರ್ ಸ್ಪೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಗಾಯಗೊಂಡ 24 ಜನರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14 ನಾಗರಿಕರು ಸೇರಿದ್ದಾರೆ, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ನಂತರ ಭದ್ರತಾ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಆ ಪ್ರದೇಶದಲ್ಲಿ ಕರ್ಪೂ ವಿಧಿಸಲಾಗಿದೆ.
ಹಫೀಜ್ ಗುಲ್ ಬಹದ್ದೂರ್ ಗುಂಪಿನ ಉಪ ಬಣವಾದ ಉಸುದ್ ಅಲ್-ಹರ್ಬ್ ಉಗ್ರಗಾಮಿ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)