ನ್ಯೂಸ್

ಪರಮಹಂಸ ನುಡಿದೀಪ: ಜಗತ್ತಿನಲ್ಲಿ ದೊರೆಯುವ ಮೂರು ಬಗೆಯ ಗುರುಗಳು

ಈ ಜಗತ್ತಿನಲ್ಲಿ ನಾನಾ ರೀತಿಯ ಗುರುಗಳು ದೊರೆಯುತ್ತಾರೆ. ಕೆಲವು ಗುರುಗಳು ಕೇವಲ ತಮ್ಮ ಉಪದೇಶದಿಂದ ನೆರೆದವರನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಾರೆ. ಮತ್ತೊಂದು ವರ್ಗದ ಗುರುಗಳು ತಮ್ಮ ಉಪದೇಶವನ್ನು ಶ್ರೋತೃಗಳು ಸರಿಯಾಗಿ ತಿಳಿದುಕೊಂಡರೇ ಅಥವಾ ಅಪಾರ್ಥ ಮಾಡಿಕೊಂಡರೇ ಎಂದು ಅರಿತು ಅದಕ್ಕನುಗುಣವಾಗಿ ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತಾರೆ. ಅತ್ಯಂತ ಉನ್ನತ ಶ್ರೇಣಿಯ ಗುರುವರ್ಯರು ಬೇರೆಯವರಿಗೆ ಉಪದೇಶಿಸುವ ಮೊದಲು ತಾವೇ ಅನುಷ್ಠಾನಗೈಯುತ್ತಾರೆ. ತದನಂತರ ತಮ್ಮ ಅನುಯಾಯಿಗಳು ಅದನ್ನು ಅನುಷ್ಠಾನಕ್ಕೆ ತರಲು ಅತ್ಯಂತ ಕಾಳಜಿಯಿಂದ ಮಾರ್ಗದರ್ಶನ ತೋರಿಸುತ್ತಾರೆ.

ಈ ನಿಟ್ಟಿನಲ್ಲಿ ನಮಗೆ ಆಧುನಿಕ ಯುಗದಲ್ಲಿ ಕಾಣಬರುವುದು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು. ಪರಮಹಂಸರು ತಮ್ಮ ಬಳಿಸಾರುವ ಶಿಷ್ಯರಿಗೆ ಕೇವಲ ಸಾಧನಾಮಾರ್ಗವನ್ನು ಸೂಚಿಸದೆ, ಸ್ವತಃ ತಾವೇ ಶಿಷ್ಯರೊಂದಿಗೆ ಸಾಧನೆಗೆ ಕುಳಿತುಕೊಳ್ಳುತ್ತಿದ್ದರು. ಇಲ್ಲಿ ನಾವು ಕಾಣುವುದೇನೆಂದರೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಕೇವಲ ಉಪದೇಶಗಳಲ್ಲಿ ಅಥವಾ ಪ್ರವಚನಗಳಲ್ಲಿ ತೊಡಗದೆ ತಮ್ಮ ಸಾಧನೆಗಳ ಸಾರವನ್ನೇ ಶಿಷ್ಯರಿಗೆ ಧಾರೆಯೆರೆಯುತ್ತಿದ್ದುದು. ಈ ಒಂದು ಮಹಾನ್ ಪರ್ವದಲ್ಲಿ ಗುರುವು ತನ್ನ ಶಿಷ್ಯರೊಂದಿಗೆ ಕುಳಿತು ಸಾಧನಾ ಮಾರ್ಗದಲ್ಲಿ ಯಾವ ರೀತಿಯ ಕಠೋರ ಕಷ್ಟಗಳು ಎದುರಾಗುತ್ತದೆ ಹಾಗೂ ಅವುಗಳನ್ನು ನಿವಾರಿಸುವ ಬಗೆಯನ್ನು ಖುದ್ದು ತಾವೇ ಅನುಭವಿಸಿದ ಅನುಭಾವದ ಸಾರದೊಂದಿಗೆ ಶಿಷ್ಯರನ್ನು ಸಾಕ್ಷಾತ್ಕಾರದ ಸೋಪಾನಗಳನ್ನು ಕೈಹಿಡಿದು ಮುನ್ನಡೆಸಿದ ಮಹಾನ್ ಅವತಾರ ವರಿಷ್ಠ ಎನ್ನಬಹುದು.

ಯುವ ಶಿಷ್ಯರ ತಂಡ ಶ್ರೀರಾಮಕೃಷ್ಣ ಪರಮಹಂಸರೊಂದಿಗೆ ಕೆಲವು ದಿನಗಳನ್ನು ಕಳೆಯಲು ದಕ್ಷಿಣೇಶ್ವರಕ್ಕೆ ಬಂತೆಂದರೆ ಈ ಪರಮಗುರುವಿಗೆ ಆನಂದವೋ ಆನಂದ. ಕಾರಣ, ತಾನು ಅನುಭವಿಸಿದ ಬ್ರಹ್ಮಾನಂದಮಯ ಜೀವನದ ಪಥವನ್ನು ಈ ಶಿಷ್ಯರಿಗೆ ತರಪೇತು ನೀಡುವಂತಹ ಅಪೂರ್ವ ಅವಕಾಶವೆಂದು ತಿಳಿಯುತ್ತಿದ್ದರು. ಸನಾತನ ಧರ್ಮದ ಪರಂಪರೆಯೇ ಇದಾಗಿತ್ತು. ಈ ಅಂಶವನ್ನು ಅರಿಯಬೇಕಾದರೆ ಪರಮ ಶಿಷ್ಯರುಗಳು ದಾಖಲಿಸಿರುವ ಈ ಘಟನೆಯನ್ನು ಇಲ್ಲಿ ನಮೂದಿಸುವುದು ಅತ್ಯಂತ ಸಮಂಜಸ ಎಂದು ಭಾವಿಸುತ್ತಾರೆ.

ಅಂದು ರಜಾದಿನಗಳಾದ್ದರಿಂದ ಯುವಶಿಷ್ಯರು ದಕ್ಷಿಣೇಶ್ವರಕ್ಕೆ ಆಗಮಿಸಿದ್ದರು. ರಾಬಾಲ, ಬಾಬುರಾಮ ಮುಂತಾದವರು ಇದ್ದ ಗುಂಪು ರಾತ್ರಿ ದಕ್ಷಿಣೇಶ್ವರದಲ್ಲಿಯೇ ಇತ್ತು. ಪರಮಹಂಸರು ಬೆಳಗಿನ ಜಾವ ಶಿಷ್ಯರನ್ನೆಲ್ಲ ಎಬ್ಬಿಸಿ, ‘ಏಳಿ, ಏಳಿ, ನಿದ್ದೆ ಮಾಡಲು ಬಂದಿರುವಿರಾ? ಏಳಿ, ಧ್ಯಾನದ ಸಮಯವಿದು. ಎಲ್ಲರೂ ಎದ್ದು ಆಸನಾದಿಗಳನ್ನು ತೆಗೆದುಕೊಂಡು ಪಂಚವಟಿಯ ದಟ್ಟ ವನದಲ್ಲಿ ಧ್ಯಾನಸ್ಥರಾಗಿ ಪರಬ್ರಹ್ಮನನ್ನು ಅರಿಯಲು, ಪಡೆಯಲು ಪ್ರಯತ್ನಿಸೋಣ’ ಎಂದು ತಾವೂ ಸಹ ಧ್ಯಾನಸ್ಥರಾಗಿ ಸಾಧನೆಯಲ್ಲಿ ಮಗ್ನರಾಗುತ್ತಿದ್ದರು. ಇದು ಪಕ್ವ ಪರಮಗುರುವಿನ ತರಪೇತು.

ಈ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಪರಮಹಂಸರು ಮೂರು ರೀತಿಯ ಗುರುಗಳನ್ನು ತಮ್ಮದೇ ಆದ ಅದ್ಭುತ ಶೈಲಿಯಲ್ಲಿ ತಿಳಿಸುತ್ತಾರೆ. ‘ಮೂರು ಶ್ರೇಣಿಯ ವೈದ್ಯರಿದ್ದಾರೆ. ಮೊದಲನೆಯ ಶ್ರೇಣಿಯವರು ನಾಡಿ ಪರೀಕ್ಷಿಸಿ ಔಷಧದ ವ್ಯವಸ್ಥೆ ಮಾಡಿ ಹೊರಟುಹೋಗುತ್ತಾರೆ. ಔಷಧವನ್ನು ಕುಡಿಯುವಂತೆ ರೋಗಿಗೆ ಕೇವಲ ಹೇಳಿ ಹೋಗುತ್ತಾರೆ. ಅವರು ಅಧಮಶ್ರೇಣಿಯ ವೈದ್ಯರು. ಇದೇ ರೀತಿಯಾಗಿ ಕೆಲವು ಮಂದಿ ಆಚಾರ್ಯರು ಉಪದೇಶ ಕೊಟ್ಟು ಹೊರಟುಹೋಗುತ್ತಾರೆ. ತಮ್ಮ ಉಪದೇಶ ಜನರಿಗೆ ಒಳ್ಳೆಯದನ್ನು ಮಾಡುತ್ತಿದೆಯೇ ಅಥವಾ ಕೆಟ್ಟದ್ದನ್ನು ಮಾಡುತ್ತಿದೆಯೇ ಎಂಬುದರ ಯೋಚನೆಯೇ ಅವರಿಗೆ ಬಾರದು. ತಮ್ಮ ಶಿಷ್ಯರ ವಿಷಯವಾಗಿ ಕಿಂಚಿತ್ತೂ ತಲೆಗೆ ಹಾಕಿಕೊಳ್ಳುವುದಿಲ್ಲ.

ಇನ್ನು ಕೆಲವು ಮಂದಿ ವೈದ್ಯರಿದ್ದಾರೆ. ಔಷಧದ ವ್ಯವಸ್ಥೆ ಮಾಡಿ ರೋಗಿಗೆ ಔಷಧ ಕುಡಿಯುವಂತೆ ಹೇಳುತ್ತಾರೆ, ರೋಗಿ ಕುಡಿಯಲಿಚ್ಛಿಸದಿದ್ದರೆ, ಆತನಿಗೆ ಅನೇಕ ವಿಧದಿಂದ ಹೇಳುತ್ತಾರೆ. ಇವರು ಮಧ್ಯಮಶ್ರೇಣಿಯ ವೈದ್ಯರು. ಹೀಗೇ ಮಧ್ಯಮ ಶ್ರೇಣಿಯ ಆಚಾರ್ಯರೂ ಇದ್ದಾರೆ. ಇವರು ಉಪದೇಶವನ್ನು ಕೊಡುವುದೂ ಅಲ್ಲದೆ, ಅದನ್ನು ಅನುಸರಿಸುವಂತೆ ಬಹಳವಾಗಿ ತಿಳಿಸಿ ಹೇಳುತ್ತಾರೆ. ಮತ್ತೆ ಉತ್ತಮ ವೈದ್ಯರಿದ್ದಾರೆ. ಒಳ್ಳೆ ಮಾತಿನಿಂದ ರೋಗಿ ಹೇಳಿದ ಹಾಗೆ ಕೇಳದಿದ್ದರೆ, ಬಲಾತ್ಕಾರವನ್ನೂ ಮಾಡುತ್ತಾರೆ. ಆವಶ್ಯಕತೆ ತೋರಿಬಂದರೆ ರೋಗಿಯ ಮೇಲೆ ಕುಳಿತು ಔಷಧ ಗಂಟಲಿನೊಳಕ್ಕೆ ಇಳಿಯುವ ಹಾಗೆ ಮಾಡಿಬಿಡುತ್ತಾರೆ. ಹಾಗೆಯೇ ಉತ್ತಮ ಶ್ರೇಣಿಯ ಆಚಾರ್ಯರಿದ್ದಾರೆ. ಇವರು ತಮ್ಮ ಶಿಷ್ಯರನ್ನು ಭಗವದಭಿಮುಖಿಗಳನ್ನಾಗಿ ಮಾಡಲು ಬಲವನ್ನೂ ಉಪಯೋಗಿಸಿಬಿಡುತ್ತಾರೆ.’

ಪರಮಹಂಸರು ಈ ನಿದರ್ಶನದ ಮೂಲಕ ನಿಜವಾದ ಹಾಗೂ ಮಹಾನ್ ಗುರುವಿನ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಸಾಮಾನ್ಯನಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ಈಗ ನಮಗೆ ಖಂಡಿತಾ ಅರ್ಥವಾಗುತ್ತದೆ ಯಾರು ಪರಮಗುರು ಸಿದ್ದಯೋಗಿ ಎಂದು. ಇದು ನಿಜವಾದ ಗುರುವಿನ, ಆಚಾರ್ಯೋತ್ತಮನ, ಪರಮಾಚಾರ್ಯನ ಅಧ್ಯಾತ್ಮ ಸಾಧನೆಯ ತರಪೇತಿಯ ಪರ್ವ. ಹಾಗಾಗಿ ಪರಮಹಂಸರಿಗೆ ಪರಮಗುರು ಸಿದ್ದಯೋಗಿ ಎಂದು ಗುರು ಕೀರ್ತನೆಯಲ್ಲಿ ವಿವರಿಸಿರುವುದು. ನಾವು ಪರಮಹಂಸರ (ಶಿಷ್ಯರ) ಅದ್ಭುತ ರೀತಿಯ ಸಾಧನಾ ತರಪೇತನ್ನು ಕಾಣುತ್ತೇವೆ. ಅವರವರ ಶಕ್ತಿಗನುಸಾರವಾಗಿ, ಭಕ್ತಿಗನುಸಾರವಾಗಿ, ಯುಕ್ತಿಗನುಸಾರವಾಗಿ, ಶಿಷ್ಯರುಗಳಿಗೆ ತಾವೇ ಸ್ವತಃ ಜೊತೆಗೂಡಿ ಸಾಧನಾ ಮಾರ್ಗದಲ್ಲಿ ಪಥಿಸುವಂತೆ ಮಾರ್ಗದರ್ಶನ ನೀಡುತ್ತಿದ್ದರು ಪರಮಗುರು ಪರಮಹಂಸರು.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ: swajapa@gmail.com)

ನಾಳೆ ವೇದಕಾಲೀನ ಜ್ಞಾನ ಕುರಿತ ಅಂಕಣ ‘ಪ್ರಾಚೀನ ಜ್ಞಾನ’