ಬೆಳಗಾವಿ: ಚೀನಾ ಸೇರಿ ಹೊರ ದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಾಗೂ ಹೊಸ ವರ್ಷಕ್ಕೆ ಜನಸಂದಣಿ ಉಂಟಾಗುವ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಗುರುವಾರ ಮಹತ್ವದ ಸಭೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿದೇಶದಿಂದ ಬರುವವರ ಮೇಲೆ ನಿಗಾವಹಿಸಲಾಗುವುದು. ಎಸಿ ಬಳಸುವ ಜಾಗಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಏರ್ಪೋಟ್ನಲ್ಲಿ ಪ್ರಯಾಣಿಕರಿಗೆ ರ್ಯಾಂಡಮ್ ಟಸ್ಟಿಂಗ್ ಕಡ್ಡಾಯ. ಐಎಲ್ಐ ಮತ್ತು ಸಾರಿ ಇರುವ ಪ್ರಕರಣಗಳನ್ನು ಕಡ್ಡಾಯವಾಗಿ ಟೆಸ್ಟಿಂಗ್ಗೆ ಒಳಪಡಿಸಲಾಗುವುದು. ಕೋವಿಡ್ ಲಸಿಕೆಯನ್ನು ಯಾರೆಲ್ಲಾ ತೆಗೆದುಕೊಂಡಿಲ್ಲ ಅವರಿಗೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು. ಕರೊನಾ ನಿಯಂತ್ರಣಕ್ಕೆ ಜನರು ಸಹಕಾರ ಕೊಡಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಕರೊನಾ ಕೇಸ್ಗಳು ಗಣನೀಯವಾಗಿ ಕುಸಿತವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದನ್ನು ನಿಲ್ಲಿಸಲಾಗಿತ್ತು. ಆದರೆ ನೆರೆಯ ಚೀನಾದಲ್ಲಿ ದೈನಂದಿನ ಕರೊನಾ ಕೇಸ್ಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ದೇಶದಲ್ಲೂ ಆತಂಕ ಶುರುವಾಗಿದೆ. ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ವರ್ಚುವಲ್ ಮೀಟಿಂಗ್ ನಡೆಸುತ್ತಿದ್ದಾರೆ.