

ಹಾಸನ: ನೂರಾರು ಕನಸಿನ ಬುತ್ತಿಯೊಂದಿಗೆ ಬಹಳ ಸಂಭ್ರಮದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ 23 ವರ್ಷದ ಯುವತಿ ಮದ್ವೆಯಾದ 7 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ರೋಹಿಣಿ(23) ಮೃತ ದುರ್ದೈವಿ. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನ ಜೊತೆ ರೋಹಿಣಿ ಮದುವೆ ಆಗಿತ್ತು. 3 ತಿಂಗಳ ಗರ್ಭಿಣಿಯಾಗಿದ್ದ ರೋಹಿಣಿ, ನಿನ್ನೆ(ಬುಧವಾರ) ಮನೆಯಿಂದ ಹೊರ ಬಂದ ರೈಲಿನ ಮೂಲಕ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ರೈಲ್ಬೆ ಸ್ಟೇಷನ್ಗೆ ಬಂದಿಳಿದಿದ್ದರು. ಸಮೀಪ ಕೆರೆ ಬಳಿ ತೆರಳಿದ್ದ ರೋಹಿಣಿ, ಅಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರ ಜತೆ ಕೆಲಕಾಲ ಮಾತನಾಡಿದ್ದಳು. ಸಂಬಂಧಿಕರ ಮನೆಗೆ ಬಂದಿದ್ದೀನಿ ಎಂದು ಮಹಿಳೆಯರಿಗೆ ಹೇಳಿದ್ದರು. ಅತ್ತ ಮಹಿಳೆಯರು ಬಟ್ಟೆ ಒಗೆದುಕೊಂಡು ಹಿಂತಿರುಗುತ್ತಿದ್ದಂತೆ ಇತ್ತ ರೋಹಿಣಿ ದುರಂತ ಅಂತ್ಯ ಕಂಡಿದ್ದಾಳೆ. ಸಾವಿಗೂ ಮುನ್ನ ಕೆರೆ ದಡದಲ್ಲಿ 1760 ರೂಪಾಯಿ, ಮೊಬೈಲ್, ಚಪ್ಪಲಿ ಬಿಟ್ಟು ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.
ಅತ್ತ ಮಗಳು ಕಾಣೆಯಾಗಿರುವ ಬಗ್ಗೆ ಕೆ.ಆರ್.ನಗರ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಟವರ್ ಲೊಕೇಷನ್ ಮೂಲಕ ರೋಹಿಣಿ ಹುಡುಕಿಕೊಂಡು ಬಂದ ಪೊಲೀಸರಿಗೆ ಕೆರೆ ಬಳಿ ಮೊಬೈಲ್, ದುಡ್ಡು, ಚಪ್ಪಲಿ ಸಿಕ್ಕಿದೆ. ಕೆರೆಯಲ್ಲಿ ಶೋಧ ನಡೆಸಿದ ಅಗ್ನಿಶಾಮಕ ಸಿಬ್ಬಂದಿಯು ರೋಹಿಣಿಯ ಶವವನ್ನು ಹೊರತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ. ಕೌಟುಂಬಿಕ ಕಲಹವೂ ಇತ್ತು. ಬೇಸತ್ತು ಮಗಳು ಸಾವಿನ ಮನೆಯ ಕದ ತಟ್ಟಿದ್ದಾಳೆ ಎಂದು ಮೃತಳ ಪಾಲಕರು ಆರೋಪಿಸಿದ್ದಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ವಿ. ರೋಹಿಣಿ ಮಾವನ ಮನೆಯವರು ಅರ್ಧ ಕೆಜಿ ಚಿನ್ನ ಕೇಳಿದ್ದರು .ನಮ್ಮ ಕೈಲಿ ಆಗಲ್ಲ ಅಂತ 250 ಗ್ರಾಂ ಚಿನ್ನ ನೀಡಿದ್ವಿ. ಆದರೂ ಅಳಿಯ ಸುಮಂತ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ರೋಹಿಣಿ ಪೋಷಕರು ಆರೋಪಿಸಿದ್ದಾರೆ.