ನ್ಯೂಸ್

ಭಾರತೀಯ ಮೌಲ್ಯಗಳನ್ನು ಬಿಂಬಿಸುವ ರಿಷಿ ಸುನಕ್​ ನನ್ನ ಅಳಿಯನಾಗಿರುವುದೇ ಹೆಮ್ಮೆ: ಸುಧಾಮೂರ್ತಿ ಮೆಚ್ಚುಗೆ | Sudha Murty

ಲಂಡನ್​: ಶನಿವಾರ (ನ.16) ಲಂಡನ್‌ನಲ್ಲಿ ನಡೆದ ಭಾರತೀಯ ವಿದ್ಯಾಭವನದ ವಾರ್ಷಿಕ ದೀಪಾವಳಿ ಸಮಾರಂಭದಲ್ಲಿ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ( Sudha Murty ), ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಸಾಕಾರಗೊಳಿಸಿದ್ದಕ್ಕಾಗಿ ತಮ್ಮ ಅಳಿಯ ಹಾಗೂ ಮಾಜಿ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಸುಧಾಮೂರ್ತಿ ಅವರು ತಮ್ಮ ಮಗಳು ಅಕ್ಷತಾ ಮೂರ್ತಿ ಮತ್ತು ಅಳಿಯ ಸುನಕ್ ಜೊತೆಗೂಡಿ, ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಬೇರುಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಸಮಾರಂಭದಲ್ಲಿ ಬೆಳಕು ಚೆಲ್ಲಿದರು. ಉತ್ತಮ ಶಿಕ್ಷಣವು ನಿಮಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ ಆದರೆ, ಶ್ರೇಷ್ಠ ಸಂಸ್ಕೃತಿಯು ನಿಮ್ಮನ್ನು ಮೂಲದಲ್ಲಿ ನೆಲೆಸುವಂತೆ ಮಾಡುತ್ತದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಯುಕೆಯ ವಿದ್ಯಾಭವನದ ವಿದ್ಯಾರ್ಥಿಗಳು ಕೂಚಿಪುಡಿ, ಕಥಕ್ಕಳಿ ಮತ್ತು ಭರತನಾಟ್ಯದಂತಹ ಸಾಂಪ್ರದಾಯಿಕ ಭಾರತೀಯ ಸಂಗೀತ ಮತ್ತು ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಸುನಕ್ ಅವರ ಪಾಲಕರಾದ ಉಷಾ ಮತ್ತು ಯಶವೀರ್ ಸುನಕ್ ಸಹ ಉಪಸ್ಥಿತರಿದ್ದರು.

ಮಾಜಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು ಬಲವಾದ ಭಾರತೀಯ ಸಾಂಸ್ಕೃತಿಕ ತಳಹದಿಯೊಂದಿಗೆ ಬೆಳೆಸಿದ್ದಕ್ಕಾಗಿ ಉಷಾ ಸುನಕ್ ಅವರನ್ನು ಸುಧಾಮೂರ್ತಿ ಶ್ಲಾಘಿಸಿದರು. ರಿಷಿ ಸುನಕ್​ ಅವರು ಭಾರತೀಯ ಪರಂಪರೆಯಲ್ಲಿ ಬೇರೂರಿರುವ ಮೌಲ್ಯಗಳನ್ನು ಹೊಂದಿರುವ ಹೆಮ್ಮೆಯ ಬ್ರಿಟಿಷ್ ಪ್ರಜೆ ಎಂದು ಕೊಂಡಾಡಿದರು.

ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಭವನ್ ಯುಕೆಯ ಪ್ರಯತ್ನಗಳನ್ನು ಬೆಂಬಲಿಸುವಂತೆ ಸುಧಾಮೂರ್ತಿ ಬ್ರಿಟಿಷ್ ಭಾರತೀಯ ಸಮುದಾಯವನ್ನು ಪ್ರೋತ್ಸಾಹಿಸಿದರು. ಭಾರತೀಯ ಸಂಸ್ಕೃತಿಯನ್ನು ಕಲಿಯಲು ನಿಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಿ. ನಮಗೆ ವಯಸ್ಸಾದಾಗ ನಾವು ನಮ್ಮ ಬೇರುಗಳಿಗೆ ಹಿಂತಿರುಗುತ್ತೇವೆ ಮತ್ತು ಈ ಭವನವು ಆ ಅಂತರಕ್ಕೆ ಸೇತುವೆಯಾಗಿದೆ ಎನ್ನುವ ಮೂಲಕ ಭವನ್ ಯುಕೆ ಸಂಸ್ಥೆಯನ್ನು ಉಳಿಸಿಕೊಳ್ಳಲು ಕೊಡುಗೆಗಳನ್ನು ನೀಡುವಂತೆ ಒತ್ತಾಯಿಸಿದರು. (ಏಜೆನ್ಸೀಸ್​)