ನ್ಯೂಸ್

ದಿಢೀರ್ ಕ್ರೀಡಾಕೂಟ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ: ದಸರಾ ರಜೆಗೆ ಮೊದಲೇ ಆಯೋಜಿಸಲು ಇಲಾಖೆ ಸೂಚನೆ

| ಹರೀಶ್ ಮೋಟುಕಾನ ಮಂಗಳೂರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ದಸರಾ ರಜೆಯ ಬಳಿಕ ಅಥ್ಲೆಟಿಕ್ಸ್ ನಡೆಸುವುದು ವಾಡಿಕೆ. ಆದರೆ ಈ ಬಾರಿ ಪರೀಕ್ಷೆಗಳು ರಜೆಗೆ ಮೊದಲೇ ಇರುವ ಕಾರಣ, ತಕ್ಷಣಕ್ಕೆ ಅಥ್ಲೆಟಿಕ್ಸ್ ಆಯೋಜಿಸಲು ಇಲಾಖೆ ಸೂಚನೆ ನೀಡಿದೆ. ಅಭ್ಯಾಸ ನಡೆಸಲು ಸಾಕಷ್ಟು ಸಮಯಾವಕಾಶ ಇಲ್ಲದೆ ಗ್ರಾಮೀಣ ಪ್ರದೇಶದ ಕ್ರೀಡಾ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದು, ಇಲಾಖೆಯ ದಿಢೀರ್ ನಿರ್ಧಾರ ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯಕ್ಕೆ ತಣ್ಣೀರು ಎರಚಿದೆ.

ಈ ಹಿಂದೆ ಗುಂಪು ಆಟಗಳು ಸೆಪ್ಟೆಂಬರ್ ತನಕ ನಡೆದು ನಂತರ ಮಧ್ಯಾವಧಿ ಪರೀಕ್ಷೆ ಇರುತ್ತಿದ್ದವು. ಬಳಿಕ ದಸರಾ ರಜೆ ನೀಡಲಾಗುತ್ತಿತ್ತು. ಅಥ್ಲೆಟಿಕ್ಸ್​ನಲ್ಲಿ ಭಾಗವಹಿಸುವವರನ್ನು ರಜೆ ಅವಧಿಯಲ್ಲಿ ದೈಹಿಕ ಶಿಕ್ಷಕರು ಸಿದ್ಧಪಡಿಸುತ್ತಿದ್ದರು. ಈ ಬಾರಿ ಮಧ್ಯಾವಧಿ ಪರೀಕ್ಷೆ ಅ.5ಕ್ಕೆ ಮುಗಿಯುತ್ತದೆ. 8ರಿಂದ ದಸರಾ ರಜೆ. ಈ ನಡುವೆ ವಲಯಮಟ್ಟದ ಅಥ್ಲೆಟಿಕ್ಸ್ ಮುಗಿಸಲು ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಿಗೆ ಸೂಚನೆ ಬಂದಿದೆ. ಪ್ರತಿಭೆ ಇದ್ದರೂ ಸ್ವಲ್ಪವೂ ಸಿದ್ಧತೆ ಇಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಿಂಥೆಟಿಕ್ ಟ್ರ್ಯಾಕ್​ಗಳಲ್ಲಿ ಅಭ್ಯಾಸ ನಡೆಸುವ ನಗರ ಪ್ರದೇಶದ ವಿದ್ಯಾರ್ಥಿಗಳ ಜತೆ ಸ್ಪರ್ಧಿಸಿ ಜಯ ಗಳಿಸುವುದು ಕನಸಿನ ಮಾತು.

ವಲಯಮಟ್ಟದಲ್ಲಿ ಗೆದ್ದ ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲವುಳ್ಳ ಗ್ರಾಮೀಣ ವಿದ್ಯಾರ್ಥಿಗಳು ಇಲಾಖೆ ಅಧಿಕಾರಿಗಳ ತಪ್ಪು ನಿರ್ಧಾರಕ್ಕೆ ಬಲಿಪಶುಗಳಾಗಿದ್ದಾರೆ. ಪ್ರತಿವರ್ಷ ನವೆಂಬರ್ ಮೊದಲ ವಾರದಲ್ಲಿ ಆರಂಭಗೊಳ್ಳುತ್ತಿದ್ದ ಕ್ರೀಡಾಕೂಟಗಳು, ತಿಂಗಳ ಕೊನೆಗೆ ಮುಗಿಯುತ್ತಿದ್ದವು. ಮಳೆ ಕಡಿಮೆಯಾಗಿ ಅಥ್ಲೆಟಿಕ್ಸ್​ಗೆ ಈ ಸಮಯ ಪ್ರಶಸ್ತವೂ ಆಗಿತ್ತು. ಈಗ ಆಗಾಗ ಮಳೆ ಬರುತ್ತಿರುವುದರಿಂದ ತರಾತುರಿಯಲ್ಲಿ ಕ್ರೀಡಾಕೂಟ ಮುಗಿಸಲು ಹೊರಟಿರುವ ಇಲಾಖೆ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಬೇಕಾಗಿದೆ ಎಂದು ದೈಹಿಕ ಶಿಕ್ಷಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ದಸರಾ ರಜೆಯ ಮೊದಲು ತರಾತುರಿಯಲ್ಲಿ ಅಥ್ಲೆಟಿಕ್ಸ್ ಆಯೋಜಿಸಲು ಇಲಾಖೆ ಅಧಿಕಾರಿಗಳು ಸೂಚಿಸಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. | ಮಧು ಬಂಗಾರಪ್ಪ, ಸಚಿವ

ಕರ್ನಾಟಕ ಪಬ್ಲಿಕ್ ಸ್ಕೂಲ್ ಶುರು

ಮಂಗಳೂರು: ರಾಜ್ಯದಲ್ಲಿ ಬಡವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 2 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಸ್ಕೂಲ್​ಗಳಿವೆ. ಪ್ರತೀ 2-3 ಗ್ರಾಪಂಗಳಿಗೆ ಒಂದು ಶಾಲೆ ಮಾಡುವ ಗುರಿ ಇದೆ. ಆರಂಭದಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 1ರಿಂದ 3 ಶಾಲೆಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿದ್ಯಾರ್ಥಿಗಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕು. ಈಗಿನ ಭಾರಕ್ಕಿಂತ ಮೂರನೇ ಒಂದರಷ್ಟು ಕಡಿಮೆ ಮಾಡಲು ಚಿಂತನೆಯಿದೆ. ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಅಭ್ಯಾಸವನ್ನು ಪ್ರಾರಂಭಿಸಲಾಗಿದೆ ಎಂದರು.