ನ್ಯೂಸ್

ಇನ್ಮುಂದೆ ಈ ರೀತಿಯ ಗಿಮಿಕ್ ಎಲ್ಲ​ ನಡೆಯಲ್ಲ... ಕಂಟೆಂಟ್​ ಕ್ರಿಯೇಟರ್ಸ್​ಗೆ ಶಾಕ್​ ಕೊಟ್ಟ ಯೂಟ್ಯೂಬ್​! YouTube

YouTube : ಯೂಟ್ಯೂಬ್​ ಕಂಪನಿ ಭಾರತದಲ್ಲಿ ತನ್ನ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲು ಸಿದ್ಧವಾಗಿದೆ. ತಪ್ಪುದಾರಿಗೆಳೆಯುವ ವಿಡಿಯೋ ಟೈಟಲ್​ ಮತ್ತು ಥಂಬ್‌ನೇಲ್‌ಗಳ ವಿರುದ್ಧ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತಿದೆ. ಇನ್ಮುಂದೆ ಯಾವುದೇ ಗಿಮಿಕ್​ ನಡೆಯುವುದಿಲ್ಲ. ಇಂತಹ ವಿಡಿಯೋಗಳನ್ನು ಯೂಟ್ಯೂಬ್ ಕ್ಲಿಕ್‌ಬೈಟ್ ವಿಡಿಯೋಗಳೆಂದು ವಿವರಿಸುತ್ತದೆ. ಕೇವಲ ಕ್ಲಿಕ್​ಗಾಗಿ ದಾರಿತಪ್ಪಿಸುವ ಥಂಬ್​ನೇಲ್​ಗಳ ವಿರುದ್ಧ ಯೂಟ್ಯೂಬ್ ಕ್ರಮ ಕೈಗೊಳ್ಳಲಿದೆ.

ಗೂಗಲ್ ಇಂಡಿಯಾದಲ್ಲಿನ ಬ್ಲಾಗ್​ ಪೋಸ್ಟ್‌ನಲ್ಲಿ ಕಂಪನಿಯು ಕೆಲವು ಶೀರ್ಷಿಕೆಗಳು ಮತ್ತು ಥಂಬ್‌ನೇಲ್‌ಗಳು ಯೂಟ್ಯೂಬ್ ಬಳಕೆದಾರರನ್ನು ತಪ್ಪುದಾರಿಗೆಳೆಯುವ, ಹತಾಶಗೊಳಿಸುವಂತಿವೆ ಎಂದು ಹೇಳಿಕೊಂಡಿದೆ. ಬಳಕೆದಾರರು ತುರ್ತು ಅಥವಾ ಪ್ರಮುಖ ಮಾಹಿತಿಗಾಗಿ ಹುಡುಕುತ್ತಿರುವಾಗ ಈ ರೀತಿಯ ದಾರಿತಪ್ಪಿಸುವ ವಿಡಿಯೋಗಳು ಹೆಚ್ಚಾಗಿ ಬರುತ್ತಿವೆ ಎಂದು ಯೂಟ್ಯೂಬ್​ ವಿವರಿಸಿದೆ.

ಬ್ರೇಕಿಂಗ್ ನ್ಯೂಸ್ ಮತ್ತು ಪ್ರಸ್ತುತ ಘಟನೆಗಳನ್ನು ಒಳಗೊಂಡ ವಿಡಿಯೋಗಳ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತದೆ. ಬ್ರೇಕಿಂಗ್ ನ್ಯೂಸ್ ಶೀರ್ಷಿಕೆಯ ವಿಡಿಯೋಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಮುಂಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಯೂಟ್ಯೂಬ್​ ಹೇಳಿದೆ.

ಚಾನಲ್‌ಗಳಿಗೆ ಸ್ಟ್ರೈಕ್ ನೀಡದೆಯೇ ಯೂಟ್ಯೂಬ್​ ಇಂತಹ ವಿಡಿಯೊಗಳನ್ನು ಆರಂಭದಲ್ಲಿ ತೆಗೆದುಹಾಕುತ್ತದೆ. ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳಲು ಕಂಟೆಂಟ್​ ಕ್ರಿಯೇಟರ್ಸ್​ಗೆ ಸಮಯವನ್ನು ನೀಡುವುದಾಗಿ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪ್ಲಾಟ್‌ಫಾರ್ಮ್‌ನಲ್ಲಿರುವ ವಿಡಿಯೋಗಳಿಗಿಂತ ಹೊಸದಾಗಿ ಅಪ್‌ಲೋಡ್ ಮಾಡಲಾಗುವ ವಿಡಿಯೋಗಳ ಮೇಲಿನ ಹೆಚ್ಚಿನ ನಿರ್ಬಂಧಗಳನ್ನು ಬಿಗಿಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಆದರೆ, ಯೂಟ್ಯೂಬ್​ ಸುದ್ದಿ ಮತ್ತು ಪ್ರಸ್ತುತ ಘಟನೆಗಳನ್ನು ಹೇಗೆ ವರ್ಗೀಕರಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಇದಲ್ಲದೆ, ಕ್ರೀಡೆ ಮತ್ತು ಮನರಂಜನೆಯಂತಹ ಸುದ್ದಿಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳಿಗೆ ನಿರ್ಬಂಧವು ಅನ್ವಯಿಸುತ್ತದೆಯೇ ಎಂಬುದರ ಕುರಿತು ಯಾವುದೇ ಸೂಚನೆಯಿಲ್ಲ. ಥಂಬ್‌ನೇಲ್‌ಗಳು, ಶೀರ್ಷಿಕೆಗಳು ಮತ್ತು ವಿಡಿಯೋ ಕಂಟೆಂಟ್​ಗಳ ನಡುವಿನ ವ್ಯತ್ಯಾಸಗಳನ್ನು ಹೇಗೆ ಪತ್ತೆ ಮಾಡುತ್ತದೆ ಎಂಬುದನ್ನು ಯೂಟ್ಯೂಬ್​ ವಿವರಿಸಿಲ್ಲ. (ಏಜೆನ್ಸೀಸ್​)