ನ್ಯೂಸ್

ಸುಶಾಂತ್​ ಸಿಂಗ್ ಸಾವಿಗೆ ದುಬೈ ಲಿಂಕ್​; ಸುಬ್ರಹ್ಮಣಿಯನ್​ ಸ್ವಾಮಿ ಹೇಳೋದೇನು?

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್​​ ಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ನಟನ ಸಾವಿನಲ್ಲಿ ದುಬೈನಲ್ಲಿರುವ ಅಕ್ರಮ ಹಣ ಸಾಗಣೆದಾರರು ಹಾಗೂ ವೃತ್ತಿಪರ ಕಿಲ್ಲರ್​ಗಳ ಪಾತ್ರವನ್ನು ತಳ್ಳಿಹಾಕಲಾಗದು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಸಾವಿನ ತನಿಖೆಯಲ್ಲಿ ಅನೇಕ ಅಪಹಾಸ್ಯಕರ ಸಂಗತಿಗಳು ನಡೆದಿವೆ. ತನಿಖೆ ಸಮಗ್ರವಾಗಿ ನಡೆಯುತ್ತಿಲ್ಲ ಎಂದು ಸುಬ್ರಹ್ಮಣಿಯನ್​ ಸ್ವಾಮಿ ಟೀಕಿಸಿದ್ದಾರೆ. ಪ್ರಕರಣವನ್ನು ಸಿಬಿಐ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್​ ಆದೇಶ ನೀಡಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಆಗಸ್ಟ್​ 16ರಂದು ಟ್ವಿಟ್​ ಮಾಡಿದದ ಸುಬ್ರಹ್ಮಣಿಯನ್​ ಸ್ವಾಮಿ ಸುಶಾಂತ್​ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದಿದ್ದರು. ಜತೆಗೆ, ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.

ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಎನ್​.ಕೆ. ಸೂದ್​ ಕೂಡ ಪ್ರಕರಣದಲ್ಲಿ ಭೂಗತ ಲೋಕದ ನಂಟು ಹೊಂದಿರಬಹುದಾದ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಭೂಗತ ಲೋಕದ ಕ್ರಿಮಿನಲ್​ಗಳು ಅತ್ಯಂತ ವ್ಯವಸ್ಥಿತವಾಗಿ ಅಪರಾಧಿಕ ಕೃತ್ಯವನ್ನು ಮುಗಿಸುತ್ತಾರೆ ಹಾಗೂ ತಮ್ಮ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಯಶಸ್ವಿಯಾಗುತ್ತಾರೆ ಎಂದು ಹೇಳಿದ್ದಾರೆ.