ನವದೆಹಲಿ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿಯಡಿ ಕಲ್ಪಿಸಿರುವ ಮೀಸಲಾತಿ ನೀಡಲಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಬುಧವಾರ ತಿಳಿಸಿದೆ. ಈ ಎರಡೂ ಧರ್ಮಗಳಲ್ಲಿ ಅಸ್ಪಶ್ಯತೆಯ ದಬ್ಬಾಳಿಕೆ ಇಲ್ಲದ ಕಾರಣ ಈ ಧರ್ಮವನ್ನು ಒಪ್ಪಿಕೊಂಡಿರುವ ದಲಿತರಿಗೆ ಮೀಸಲಾತಿ ನೀಡುವುದು ಅಸಂವಿಧಾನಿಕ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
1950ರ ಪರಿಶಿಷ್ಟ ಜಾತಿ ಆದೇಶವು ಕಾಲ ಕಾಲಕ್ಕೆ ಪರಿಷ್ಕೃತಗೊಂಡಿದ್ದು, ಹಿಂದು, ಸಿಖ್ಖ ಮತ್ತು ಬೌದ್ಧ ಧರ್ಮದಲ್ಲಿ ದಲಿತರಾಗಿದ್ದವರಿಗೆ ಮಾತ್ರ ಪರಿಶಿಷ್ಟ ಜಾತಿ ಅಡಿಯ ಮೀಸಲಾತಿ ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಮೂರು ಬಿಟ್ಟು ಬೇರೆ ಧರ್ಮಕ್ಕೆ ಮತಾಂತರ ಆದವರಿಗೆ ಮೀಸಲಾತಿಯನ್ನು ಅನ್ವಯಿಸಲಾಗದು ಎಂದಿದೆ.
ದಲಿತ ಕ್ರಿಶ್ಚಿಯನ್ನರು ಮತ್ತು ದಲಿತರ ಮುಸ್ಲಿಮರನ್ನು ಪರಿಶಿಷ್ಟ ಜಾತಿಯ ವ್ಯಾಪ್ತಿಗೆ ತರಬೇಕು ಎಂಬ ಜಸ್ಟೀಸ್ ರಂಗನಾಥ ಮಿಶ್ರಾ ಆಯೋಗದ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲವಾದ್ದರಿಂದ ಈ ಆಯೋಗದ ವರದಿ ಉಲ್ಲೇಖಿಸಿ ಮೀಸಲಾತಿಗೆ ಒತ್ತಾಯಿಸುವುದು ಅಪ್ರಸ್ತುತವಾಗುತ್ತದೆ ಎಂದು ಹೇಳಿದೆ.
1950ರ ಪರಿಶಿಷ್ಟ ಜಾತಿ ಆದೇಶವು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ 14 (ಕಾನೂನಿನಡಿ ಎಲ್ಲರೂ ಸಮಾನರು) ಮತ್ತು 15ನೇ ವಿಧಿಗಳಿಗೆ (ಧರ್ಮ, ಜಾತಿ, ಜನಾಂಗದ ಆಧಾರದಲ್ಲಿ ತಾರತಮ್ಯ ನಿಷೇಧ) ವಿರುದ್ಧವಾಗಿದೆ. ಆದ್ದರಿಂದ ಕ್ರೈಸ್ತ ಮತ್ತು ಮುಸ್ಲಿ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೂ ಮೀಸಲು ಕಲ್ಪಿಸಬೇಕು ಎಂಬ ಅರ್ಜಿಗೆ ಸರ್ಕಾರ ಅಫಿಡವಿಟ್ ಮೂಲಕ ಪ್ರತಿಕ್ರಿಯೆ ದಾಖಲಿಸಿದೆ. ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಮತ್ತು ಇತರರು ಸಲ್ಲಿಸಿರವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.