ನ್ಯೂಸ್

ಬಸ್​ ನಿಲ್ಲಿಸಿ ನಡುರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲು ಹೋದ ನಟಿ, ಬಿಜೆಪಿ ನಾಯಕಿಯ ಬಂಧನ!

ಚೆನ್ನೈ: ನಡುರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡಿ, ಸರ್ಕಾರಿ ಬಸ್​ ಉದ್ಯೋಗಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ನಾಯಕಿ ಹಾಗೂ ನಟಿ ರಂಜನಾ ನಚಿಯರ್​ರನ್ನು ಬಂಧನ ಮಾಡಲಾಗಿದೆ.

ಬಸ್​ನಲ್ಲಿ ಜೋತು ಬಿದ್ದು ಅಪಾಯಕಾರಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ನಡುರಸ್ತೆಯಲ್ಲೇ ಥಳಿಸಿದ್ದಕ್ಕೆ ಮಾಂಗಾಡು ಪೊಲೀಸರು ರಂಜನಾರನ್ನು ಶನಿವಾರ (ನ.04) ಬಂಧಿಸಿದ್ದಾರೆ.

ಶನಿವಾರ ಚೆನ್ನೈನ ಕರುಂಬಕ್ಕಂನಲ್ಲಿ ಈ ಘಟನೆ ನಡೆದಿದೆ. ಕುಂದ್ರತ್ತೂರಿನಿಂದ ಪೋರೂರಿಗೆ ತೆರಳುತ್ತಿದ್ದ ಕಿಕ್ಕಿರಿದು ತುಂಬಿದ್ದ ಸರ್ಕಾರಿ ಬಸ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುವುದನ್ನು ಕಾರಿನಲ್ಲಿ ತೆರಳುತ್ತಿದ್ದ ರಂಜನಾ ಗಮನಿಸಿದ್ದಾರೆ. ನಂತರ ಹಿಂಬಾಲಿಸಿ ಹೋಗಿ, ಬಸ್​ ನಿಲ್ಲಿಸಿದ್ದಾರೆ. ಬಸ್​ನ ಬಾಗಿಲ ಬಳಿ ಬಂದು ರಂಜನಾ, ಕೆಳಗಡೆ ಇಳಿಯುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ಆದರೆ, ಇಳಿಯಲು ನಿರಾಕರಿಸಿದಾಗ ಆಕ್ರೋಶಗೊಂಡ ರಂಜನಾ, ವಿದ್ಯಾರ್ಥಿಗಳನ್ನು ಥಳಿಸುತ್ತಾರೆ. ಇದೇ ಸಂದರ್ಭದಲ್ಲೇ ಬಸ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ ರಂಜನಾ, ಸ್ವಲ್ಪ ಜವಾಬ್ದಾರಿ ತೋರುವಂತೆ ಒತ್ತಾಯಿಸಿದರು. ಇದಿಷ್ಟು ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋಗೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ರಂಜನಾ ಅವರು ಮಾಡಿದ್ದು ಸರಿ. ಬಸ್​ನಲ್ಲಿ ಈ ರೀತಿಯ ಪ್ರಯಾಣ ತುಂಬಾ ಅಪಾಯ. ಸ್ವಲ್ಪ ಯಾಮಾರಿದರೆ ಪ್ರಾಣವೇ ಹೋಗುತ್ತದೆ ಎಂದು ವಾದಿಸಿದ್ದಾರೆ. ಇನ್ನೂ ಕೆಲವರು ಆಕೆಗೆ ಹೊಡೆಯುವ ಹಕ್ಕನ್ನು ಕೊಟ್ಟಿದ್ದು, ಯಾರು? ಬೇಕಿದ್ದರೆ ಬಾಯಿ ಮಾತಲ್ಲಿ ಒಂದೆರೆಡು ಬುದ್ಧಿಮಾತು ಹೇಳಬಹುದಿತ್ತು. ಆದರೆ, ಕೈ ಮಾಡಿದ್ದು ಸರಿಯಲ್ಲ. ಅಲ್ಲದೆ, ಅವರು ಬಳಸಿ ಭಾಷೆಯೂ ಕೂಡ ಸುಸಂಸ್ಕೃತವಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ.

ವಿಡಿಯೋ ವೈರಲ್​ ಆದ ಬಳಿಕ ಅದು ಮಾಂಗಾಡು ಠಾಣಾ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ, ರಂಜನಾರನ್ನು ಬಂಧಿಸಲು ಅವರ ಮನೆಗೆ ತೆರಳಿದಾಗ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಬಳಿ ಅರೆಸ್ಟ್​ ವಾರೆಂಟ್‌ಗೆ ಒತ್ತಾಯಿಸುತ್ತಿರುವ ದೃಶ್ಯಾವಳಿ ಮತ್ತೊಂದು ವಿಡಿಯೋದಲ್ಲಿದ್ದು, ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ರಂಜನಾ ವಿರುದ್ಧ ಯಾವುದೇ ಅರೆಸ್ಟ್​ ವಾರಂಟ್ ಹೊರಡಿಸಲಾಗಿಲ್ಲ ಮತ್ತು ಎಫ್‌ಐಆರ್ ಮಾತ್ರ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)