ವಿಶ್ವಕಪ್ ಫೈನಲ್​ ದಿನದಂದು ಈ ಸಾಹಸಕ್ಕೆ ಕೈ ಹಾಕ್ಬೇಡಿ! ಖಲಿಸ್ತಾನಿ ಉಗ್ರನಿಂದ ಮತ್ತೊಂದು ಬೆದರಿಕೆ ​

Khalistani Terrorist
Published on

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್​ನ ಮತ್ತೊಂದು ಬೆದರಿಕೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಆತ ನವೆಂಬರ್​​ 19ರಂದು ಏರ್​ ಇಂಡಿಯಾ ವಿಮಾನ ಮೂಲಕ ಪ್ರಯಾಣ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾನೆ. ಈ ಹಿಂದೆ ಈತ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ.

ಈ ಗುರುಪತ್ವಂತ್ ಸಿಂಗ್ ಪನ್ನುನ್ ನಿಷೇಧಿತ ಅಮೆರಿಕ ಮೂಲಕ ಸಿಖ್​ ಫಾರ್​ ಜಸ್ಟೀಸ್​ (ಎಸ್​ಎಫ್​ಜೆ) ಸಂಘಟನೆಯ ಮುಖ್ಯಸ್ಥ. ನ.19ರಂದು ಏರ್​ ಇಂಡಿಯಾದಲ್ಲಿ ಪ್ರಯಾಣಿಸಬೇಡಿ. ಅಪ್ಪಿತಪ್ಪಿ ಈ ಸಾಹಸಕ್ಕೆ ಕೈ ಹಾಕಬೇಡಿ. ಇಲ್ಲವಾದಲ್ಲಿ, ನಿಮ್ಮ ಜೀವಕ್ಕೆ ಆಪತ್ತು ಬರಬಹುದು ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಅಲ್ಲದೆ, ನ.19 ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲಿದ್ದು, ಅದರ ಹೆಸರನ್ನು ಬದಲಾಯಿಸಲಾಗುವುದು ಎಂದಿದ್ದಾನೆ.

ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ಏಕದಿನ ವಿಶ್ವಕಪ್‌ ಟೂರ್ನಿಯ ಅಂತಿಮ ಪಂದ್ಯವೂ ಸಹ ಇದೇ ದಿನ ನಡೆಯಲಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ನ.19ರ ದಿನವನ್ನು ಒತ್ತಿ ಹೇಳಿದ್ದಾನೆ.

ಪ್ರಧಾನಿ ಮೋದಿಗೆ ಬೆದರಿಕೆ

ಅ. 10ರಂದು ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ವಿಡಿಯೋದಲ್ಲಿ ಇದೇ ಪನ್ನುನ್​ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ. ಇಸ್ರೇಲ್-ಪ್ಯಾಲೆಸ್ತೀನ್​ ಯುದ್ಧದಿಂದ ಕಲಿತುಕೊಳ್ಳದಿದ್ದರೆ ಅದೇ ರೀತಿಯ ಪ್ರತಿಕ್ರಿಯೆ ಭಾರತದಲ್ಲೂ ಉಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದ. ಪಂಜಾಬ್​ನಿಂದ ಪ್ಯಾಲೆಸ್ತೀನ್​ವರೆಗೂ ಅಕ್ರಮ ವಶದಲ್ಲಿರುವ ಜನರು ಪ್ರತಿಕ್ರಿಯಿಸಲಿದ್ದಾರೆ. ಅಲ್ಲದೆ, ಭಾರತವು ಪಂಜಾಬ್​ ಆಕ್ರಮಿಸುವುದನ್ನು ಮುಂದುವರಿಸಿದರೆ ಅಲ್ಲಿ ಪ್ರತಿಕ್ರಿಯೆ ಇರಲಿದೆ ಮತ್ತು ಪಂಜಾಬ್​ನಲ್ಲಿ ಮುಂದಿನ ದಿನಗಳಲ್ಲಿ ಏನೇ ನಡೆದರೂ ಅದಕ್ಕೆ ಪ್ರಧಾನಿ ಮೋದಿ ಹೊಣೆಯಾಗಲಿದ್ದಾರೆ ಎಂದಿದ್ದ. ಎಸ್​ಎಫ್​ಜೆ ಸಂಘಟನೆಯು ಮತ ಮತ್ತು ಮತದಾನವನ್ನು ನಂಬುತ್ತದೆ ಹಾಗೂ ಪಂಜಾಬ್​ ವಿಮೋಚನೆಯನ್ನು ಬಯಸುತ್ತದೆ. ಇದೀಗ ಆಯ್ಕೆಗಳು ಭಾರತದ ಮುಂದಿವೆ. ಬ್ಯಾಲೆಟ್​ ಆಫ್​ ಬುಲೆಟ್​ ಎಂದು ಶೂಟಿಂಗ್ ಮಾಡುವ ಸಂಕೇತದೊಂದಿಗೆ ಕ್ಯಾಮೆರಾ ಮುಂದೆ ಪನ್ನುನ್​ ಎಚ್ಚರಿಕೆ ನೀಡಿದ್ದ.

ಅಂದಹಾಗೆ ಪನ್ನುನ್​ ಬಗ್ಗೆ ಹೇಳುವುದಾದರೆ, ಪಂಜಾಬ್​ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್​, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಹಾಗೂ ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

2021ರ ಫೆಬ್ರವರಿ 3ರಂದು ಪನ್ನುನ್​ ವಿರುದ್ಧ ಎನ್​ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್​ 29ರಂದು ಸರ್ಕಾರ ಘೋಷಣೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net