ನ್ಯೂಸ್

ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಆಗ್ರಹ; ರಸ್ತೆ ತಡೆದು ವಿದ್ಯಾರ್ಥಿಗಳಿಂದ ಬೃಹತ್​ ಪ್ರತಿಭಟನೆ!

ಮೋಹನ್​ ಶೆಟ್ಟಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಮಾರ್ಗದಲ್ಲಿ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್​ ಸೇವೆ ಒದಗಿಸಿ ಎಂದು ಅನೇಕ ಬಾರಿ ಮನವಿ ಮಾಡಿದರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳ ಗುಂಪು, ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದೆ.

ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿದ ವಿದ್ಯಾರ್ಥಿಗಳು, ರಸ್ತೆಗಿಳಿದ ಬಸ್​ ಅನ್ನು ತಡೆದು, ಬಸ್​ ಡಿಪ್ಪೋ ಮತ್ತು ಸಾರಿಗೆ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಎಬಿವಿಪಿ ಸಂಘಟನೆ ಮತ್ತು ವಿದ್ಯಾರ್ಥಿಗಳಿಂದ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದು, ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಮಾರ್ಗಕ್ಕೆ ಹೆಚ್ಚುವರಿ ಬಸ್ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಬಸ್​ ಬಿಡುವಂತೆ ಈ ಹಿಂದೆ ಹಲವು ಬಾರಿ ಮನವಿ ಮಾಡಿದರು ಕೂಡ ಯಾವುದೇ ಕ್ರಮ ಕೈಗೊಳ್ಳದ ಡಿಪೋ ಮ್ಯಾನೇಜರ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಕೆಎಸ್ಆರ್​ಟಿಸಿ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

200 ರಿಂದ 300 ವಿದ್ಯಾರ್ಥಿಗಳು ಸಂಚರಿಸುವ ಮಾರ್ಗಕ್ಕೆ ಹೆಚ್ಚುವರಿ ಬಸ್​ ಅಗತ್ಯವಿದೆ ಎಂದು ಹೇಳಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವವರೆಗೂ ಬಸ್ ಸಂಚರಿಸಲು ಬಿಡುವುದಿಲ್ಲ ಎಂದು ತಡೆಹಿಡಿದು ಪ್ರತಿಭಟಿಸಿದ್ದಾರೆ.