ನ್ಯೂಸ್

ಎಕ್ಸಾಮ್​ಗೆ ತಡವಾಗಿದ್ದಕ್ಕೆ Paragliding ಮೂಲಕ ಕಾಲೇಜಿಗೆ ಬಂದ ವಿದ್ಯಾರ್ಥಿ; ವಿಡಿಯೋ ವೈರಲ್

ಮುಂಬೈ: ಸಾಮಾನ್ಯವಾಗಿ ನಾವು ನೋಡಿರುವಂತೆ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್, ಕಾರಿನಲ್ಲಿ ಹೋಗುವುದನ್ನು ನೋಡಿದ್ಧೇವೆ. ಕೆಲವೊಮ್ಮೆ ಕಾಲೇಜಿಗೆ ವಿದ್ಯಾರ್ಥಿಗಳು ಎತ್ತಿನ ಗಾಡಿಯ ಮೂಲಕ ಹೋಗಿರುವುದನ್ನು ಸಹ ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಕಾಲೇಜಿಗೆ ಪ್ಯಾರಾಗ್ಲೈಡಿಂಗ್​​ (Paragliding) ಮೂಲಕ ತೆರಳಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. 

ಸಾಮಾನ್ಯವಾಗಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಅರ್ಧ ಗಂಟೆಗೂ ಮುಂಚಿತವಾಗಿ ಕಾಲೇಜಿನ ಬಳಿ ಹಾಜರಿರುತ್ತಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಟ್ರಾಫಿಕ್ ಸಮಸ್ಯೆಯಿಂದ ತನಗೆ ತಡವಾಗಬಾರದೆಂಬ ಕಾರಣಕ್ಕೆ ಮಹಾರಾಷ್ಟ್ರ ಸತಾರಾದಲ್ಲಿ ಪ್ಯಾರಾಗ್ಲೈಡಿಂಗ್​​ (Paragliding) ಮೂಲಕ ಕಾಲೇಜಿಗೆ ಹೋಗಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಷ್ಟಕ್ಕೂ ನಡೆದಿದ್ದಾರು ಏನು? 

ಸತಾರಾ ಜಿಲ್ಲೆಯ ಪಸರಣಿ ಗ್ರಾಮದ ಸಮರ್ಥ್​ ಮಹಾಂಗಡೆ ಎಂದು ಗುರುತಿಸಲಾದ ವಿದ್ಯಾರ್ಥಿಯು ಪರೀಕ್ಷೆಯ ದಿನದಂದು ಕೆಲಸದ ನಿಮಿತ ಪಂಚಗಣಿ ಎಂಬಲ್ಲಿಗೆ ಹೋಗಿದ್ದರು. ಬಳಿಕ ಎಕ್ಸಾಮ್ ಇರುವ ವಿಚಾರವನ್ನು ನೆನೆಸಿಕೊಂಡ ಸಮರ್ಥ್​ ಮುಂದಿನ 15-20 ನಿಮಿಷದಲ್ಲಿ ಕಾಲೇಜಿಗೆ ತಲುಪಲು ಯೋಚಿಸಿದಾಗ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಉಂಟಾಗಿತ್ತು. ಇದರಿಂದಾಗಿ ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗದೆ ಪರದಾಡಿದರು. 

ಬಳಿಕ ಸಮರ್ಥ್ ನೆರವಿಗೆ ಧಾವಿಸಿದ ಪ್ಯಾರಾಗ್ಲೈಡಿಂಗ್ (Paragliding) ತಜ್ಞರು ಅವರನ್ನು ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಿಸಿದ್ದು, ವಿದ್ಯಾರ್ಥಿಯ ನೆರವಿಗೆ ಧಾವಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಹುಚ್ಚು ಸಾಹಸವನ್ನು ಮೆಚ್ಚಿ ನೆಟ್ಟಿಗರು ಕಮೆಂಟ್ ಹಾಕುತ್ತಿದ್ದಾರೆ.