ಭೋಪಾಲ್: ಕಾಲೇಜಿನಲ್ಲಿ ತನ್ನ ಪ್ರಾಂಶುಪಾಲರನ್ನೇ (Principal Dead) ಟಾರ್ಗೆಟ್ ಮಾಡಿದ ಪಿಯು ವಿದ್ಯಾರ್ಥಿಯೊಬ್ಬ, ಬಂದೂಕಿನಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಭಯಾನಕ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದ ಧಮೋರಾ ಸರ್ಕಾರಿ ಕಾಲೇಜಿನಲ್ಲಿ ಸಂಭವಿಸಿದೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಸುರೇಂದ್ರ ಕುಮಾರ್ ಸಕ್ಸೇನಾ (55) ಎಂದು ಗುರುತಿಸಲಾಗಿದ್ದು, ಇವರು ಕಾಲೇಜಿನ ಪ್ರಾಂಶುಪಾಲರು ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು ಐದು ವರ್ಷಗಳ ಕಾಲ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸುರೇಂದ್ರ ಅವರನ್ನು ಅವರದ್ದೇ ಕಾಲೇಜಿನ ಪಿಯು ವಿದ್ಯಾರ್ಥಿ ಗುಂಡಿಕ್ಕಿ ಕೊಂದಿದ್ದಾನೆ. ಪ್ರಿನ್ಸಿಪಾಲ್ರನ್ನು ಹತ್ಯೆಗೈದ ಬಳಿಕ ಅವರದ್ದೇ ಸ್ಕೂಟರ್ನಲ್ಲಿ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಹೇಳಿಕೆಯ ಪ್ರಕಾರ, ದ್ವಿತೀಯ ಪಿಯು ವಿದ್ಯಾರ್ಥಿ ಹತ್ಯೆಗೈದ ಪ್ರಾಂಶುಪಾಲರ ಸ್ಕೂಟರ್ನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ವಿದ್ಯಾರ್ಥಿ ಕಾಲೇಜಿನಲ್ಲಿ ಅಶಿಸ್ತಿನ ಇತಿಹಾಸ ಹೊಂದಿದ್ದು, ಧಿಲಾಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ನಾವು ಪರಿಶೀಲಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ಕೊಲೆಗೈದ ತಕ್ಷಣ ಅಲ್ಲಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಈ ಘಟನೆ ಬಗ್ಗೆ ಮೃತ ಸಕ್ಸೇನಾ ಅವರ ಕುಟುಂಬ ಮಾತನಾಡಿದ್ದು, "ಇದು ಮುಂಚಿತವಾಗಿಯೇ ಸಂಚು ಹೂಡಿ ನಡೆಸಿರುವ ಹತ್ಯೆಯಾಗಿದೆ. ಶಾಲೆಯಲ್ಲಿ ಕೆಲವು ವ್ಯಕ್ತಿಗಳು ಅನಗತ್ಯವಾಗಿ ಅವರ ಮೇಲೆ ಒತ್ತಡ ಹೇರುತ್ತಿದ್ದರು. ಮತ್ತು ಕೆಟ್ಟ ಕೃತ್ಯಗಳನ್ನು ನಡೆಸುವಂತೆ ಕಿರುಕುಳ ನೀಡುತ್ತಿದ್ದರು. ಈ ಹತ್ಯೆಯು ಪಿತೂರಿ" ಎಂದು ದುಃಖ ತೋಡಿಕೊಂಡಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಗೆ ಸಹಕರಿಸುವಂತೆ ವಿಧಿವಿಜ್ಞಾನ ತಂಡಗಳನ್ನು ನಿಯೋಜಿಸಿದ್ದಾರೆ,(ಏಜೆನ್ಸೀಸ್),