ಹೈದರಾಬಾದ್: ಓದಲು ನನ್ನಿಂದಾಗುತ್ತಿಲ್ಲ, ತಂದೆ ತಾಯಿ ಓದು ಎಂದು ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಪರೀಕ್ಷೆಯಲ್ಲಿ ಫೇಲ್ ಆಗಿ, ತಂದೆ ತಾಯಿಗೆ ಮುಖ ತೋರಿಸಲಾಗದೆ ಸಾಯುವವರ ಸುದ್ದಿಯನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ರ್ಯಾಂಕ್ ಬಂದು, ಓದಲು ಹಣವಿಲ್ಲವೆನ್ನುವ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಐಶ್ವರ್ಯಾ ರೆಡ್ಡಿ ಬಾಲ್ಯದಿಂದಲೂ ಓದಿನಲ್ಲಿ ಮುಂದೆ. ಪಿಯುಸಿಯಲ್ಲಿ ಸೈನ್ಸ್ ಆಯ್ಕೆ ಮಾಡಿಕೊಂಡ ಆಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ್ ಬಂದಿದ್ದಳು. ಹೆಚ್ಚು ಅಂಕ ಗಳಿಸಿದ್ದ ಆಕೆಗೆ ದೆಹಲಿಯ ಶ್ರೀ ರಾಮ್ ಮಹಿಳಾ ಕಾಲೇಜಿನಲ್ಲಿ ಬಿ.ಎಸ್ಸಿ ಗಣಿತಕ್ಕೆ ಉಚಿತ ಸೀಟು ಸಿಕ್ಕಿತ್ತು. ಅಷ್ಟೇ ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡುವ ಇನ್ಸ್ಪೈರ್ ವಿದ್ಯಾರ್ಥಿ ವೇತನಕ್ಕೂ ಆಕೆ ಆಯ್ಕೆಯಾಗಿದ್ದಳು. ಐಎಎಸ್ ಅಧಿಕಾರಿಯಾಗಬೇಕೆಂಬ ದೊಡ್ಡ ಕನಸನ್ನು ಕಟ್ಟಿಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಳು.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಮಾಜಿ ಸಚಿವರ ಪುತ್ರ ಅರೆಸ್ಟ್
ಲಾಕ್ಡೌನ್ ಆರಂಭವಾಗಿ ಕಾಲೇಜುಗಳು ಮುಚ್ಚಿದ ಕಾರಣ ಮಾರ್ಚ್ ತಿಂಗಳಲ್ಲಿ ಆಕೆ ತನ್ನೂರಿಗೆ ಮರಳಿದ್ದಾಳೆ. ಆಟೋ ಮೆಕಾನಿಕ್ ಆಗಿರುವ ಅಪ್ಪ ಮತ್ತು ಟೈಲರ್ ಕೆಲಸ ಮಾಡುವ ಅಮ್ಮ ಇಬ್ಬರೂ ಲಾಕ್ಡೌನ್ ಸಮಯದಲ್ಲಿ ದುಡಿಮೆಯಿಲ್ಲದೆ ಸಾಲ ಮಾಡಿಕೊಂಡಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ಸಾಲವಾಗಿದೆ. ಇನ್ನೊಬ್ಬ ಮಗಳ ಶಿಕ್ಷಣವನ್ನು ಸ್ಥಗಿತಗೊಳಿಸಲಾಗಿದೆ.
ಇತ್ತೀಚೆಗೆ ಐಶ್ವರ್ಯಾಗೆ ಆನ್ಲೈನ್ ತರಗತಿಗಳನ್ನು ಆರಂಭಿಸುವುದಾಗಿ ಕಾಲೇಜಿನಿಂದ ಕರೆ ಬಂದಿದೆ. ಲ್ಯಾಪ್ಟಾಪ್ ಇಲ್ಲದ ಕಾರಣ ಮೊಬೈಲ್ನಲ್ಲೇ ಆಕೆ ಆನ್ಲೈನ್ ತರಗತಿಗೆ ಹಾಜರಾಗಿದ್ದಾಳೆ. ತನಗೆ ಲ್ಯಾಪ್ಟಾಪ್ ಕೊಡಿಸಿ ಎಂದು ನಟ ಸೋನು ಸೂದ್ ಅವರಿಗೂ ಮನವಿ ಮಾಡಿ ಇ ಮೇಲ್ ಕಳುಹಿಸಿದ್ದಳಂತೆ. ಆದರೆ ಇದೇ ಸಮಯದಲ್ಲಿ ದೆಹಲಿಯ ಹಾಸ್ಟೆಲ್ ರೂಂ ಖಾಲಿ ಮಾಡಿ ಎಂದು ಹಾಸ್ಟೆಲ್ನಿಂದ ಕರೆ ಬಂದಿದೆ. ತನ್ನ ಬಳಿ ಲ್ಯಾಪ್ಟಾಪ್ಗೆ ಹಣವಿಲ್ಲ, ಹಾಸ್ಟೆಲ್ ರೂಂ ಖಾಲಿ ಮಾಡಬೇಕು ಎನ್ನುವ ಚಿಂತೆಗೆ ಬಿದ್ದ ಐಶ್ವರ್ಯಾ ನವೆಂಬರ್ 2ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 'ನನ್ನ ಸಾವಿಗೆ ಯಾರೂ ಕಾರಣರಲ್ಲ. ನನಗೆ ಓದಬೇಕಿದೆ. ಓದದೆ ನಾನು ಬದುಕಲಾರೆ. ಆದರೆ ಲ್ಯಾಪ್ಟಾಪ್ ಇಲ್ಲದಿರುವ ಕಾರಣ ನಾನು ಓದಲಾಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಡೆತ್ ನೋಟ್ ಬರೆದಿಟ್ಟು, ಪ್ರಾಣ ಬಿಟ್ಟಿದ್ದಾಳೆ.
ಯುವತಿಯ ಸಾವಿಗೆ ಆಕೆಯ ಕಾಲೇಜೇ ಕಾರಣ ಎಂದು ಅನೇಕರು ದೂರಿದ್ದಾರೆ. ಕಷ್ಟದ ಸಮಯದಲ್ಲಿ ಹಾಸ್ಟೆಲ್ ಖಾಲಿ ಮಾಡಲು ಹೇಳಿದ್ದು, ಕಾಲೇಜಿನ ತಪ್ಪು ಎಂದು ಆರೋಪಿಸಲಾಗುತ್ತಿದೆ. (ಏಜೆನ್ಸೀಸ್)