ಬೆಂಗಳೂರು: ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಧ್ವನಿ ಎತ್ತುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯನಂತರ ಎಲ್ಲ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಇದ್ದಾಗ 180 ಕೋಟಿ ರೂ. ಖರ್ಚು ಮಾಡಿಸಿ ಜಾತಿ ಜನಗಣತಿ ಮಾಡಿಸಿದ್ದೆ ಎಂದರು.
90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇಟ್ಟುಕೊಂಡು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಸರಿಯಲ್ಲ. ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಪ್ರಧಾನಿ ಮೋದಿ ಬಳಿಗೆ ನಿಯೋಗ ಕರೆದೊಯ್ದು ಜಾತಿ ಜನಗಣತಿ ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಸೆನ್ಸಸ್ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಎಚ್ಚರಿಕೆ ಅಗತ್ಯ: ಕೋವಿಡ್ ಮೂರನೇ ಅಲೆ ಆತಂಕದಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ರ್ಚಚಿಸುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಕರೊನಾ ನಿಯಂತ್ರಣದಲ್ಲಿ ಇದ್ದಾಗ ಸೂಕ್ತ ಮುನ್ನೆಚ್ಚರಿಕೆ ಮತ್ತು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯುವುದು ಒಳ್ಳೆಯದು ಎಂದುತ್ತರಿಸಿದರು. ಹಾಗೆಯೇ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಆದರೆ ಅತಿ ಹೆಚ್ಚು ಜನ ಗುಂಪು ಸೇರದಂತೆ, ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಣೆ ಮಾಡದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಾದ ಅಗತ್ಯ ಎಂದು ಸಿದ್ದರಾಮಯ್ಯ ಹೇಳಿದರು. ಜನಾಶೀರ್ವಾದ ಯಾತ್ರೆಗೆ ಸಹಸ್ರಾರು ಮಂದಿಯನ್ನು ಸೇರಿಸಿ ಕೇಂದ್ರ ಸಚಿವರು ಮತ್ತು ಬಿಜೆಪಿ ಕೋವಿಡ್ ನಿಯಮ ಉಲ್ಲಂಘಿಸಿದ್ದನ್ನು ಟೀಕಿಸಿದರು.
ಖಂಡನೆ: ಮೆಟ್ರೋ ಅಧಿಕಾರಿಗಳು ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಈ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡಕ್ಕೆ ಅಗ್ರಸ್ಥಾನ ಇರಬೇಕು. ಕೇಂದ್ರ ಸಚಿವರು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಭಾಷಣ ಮಾಡಿದರೆ ತಪ್ಪಿಲ್ಲ. ಆದರೆ ಕನ್ನಡ ನೆಲದಲ್ಲಿ ಮೆಟ್ರೋ ಅಧಿಕಾರಿಗಳು ಕನ್ನಡಕ್ಕೆ ಅವಮಾನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಖಂಡಿಸುತ್ತೇನೆ ಎಂದರು.
3 ಕೆಜಿ ತೂಕ ಇಳಿಕೆ: ಹತ್ತು ದಿನಗಳ ಬಳಿಕ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರ ದಿಂದ ಮಂಗಳವಾರ ಹೊರಬಂದ ಸಿದ್ದರಾಮಯ್ಯ, ತಮ್ಮ ಚಿಕಿತ್ಸೆಯ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಕರೊನಾ ಸೋಂಕಿಗೆ ಒಳಗಾದ ಬಳಿಕ ದೇಹದ ತೂಕ 3-4 ಕೆ.ಜಿ. ಹೆಚ್ಚಾಗಿತ್ತು. ಈಗ 3 ಕೆ.ಜಿ. ಕಡಿಮೆಯಾಗಿದೆ ಎಂದು ಹೇಳಿದರು.
ಜಿಟಿಡಿಗೆ ಭರವಸೆ: ತಾವು ಜೆಡಿಎಸ್ ಸಂಪರ್ಕ ಕಡಿತಗೊಳಿಸುವ ತೀರ್ಮಾನ ಪ್ರಕಟಿಸಿದ್ದ ಜಿ.ಟಿ.ದೇವೇಗೌಡ ವಿಚಾರದಲ್ಲಿ ಕಾಂಗ್ರೆಸ್ ನಡೆ ಏನೆಂಬುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ. ‘ಜಿ.ಟಿ.ದೇವೇಗೌಡ ನನ್ನ ಜತೆ ಮಾತಾಡಿರುವುದು ಸತ್ಯ. ಜಿಟಿಡಿ, ಮಗ ಹರೀಶನಿಗೂ ಟಿಕೆಟ್ ಕೇಳಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಟಿಕೆಟ್ ಬೇಕೆಂದು ಕೇಳಿಲ್ಲ. ಈ ಬಗ್ಗೆ ಸುರ್ಜೆವಾಲ ಜತೆ ರ್ಚಚಿಸುತ್ತೇನೆಂದು ಹೇಳಿದ್ದೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಜಿ.ಟಿ.ದೇವೇಗೌಡ ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೂ ರ್ಚಚಿಸಿದ್ದಾರೆ. ಹೈಕಮಾಂಡ್ ಜತೆಗೆ ರ್ಚಚಿಸುವುದಾಗಿ ತಿಳಿಸಿದ್ದೇನೆ. ಈ ವಿಚಾರದಲ್ಲಿ ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ರ್ಚಚಿಸಿದ ಬಳಿಕ ಮುಂದಿನ ತೀರ್ಮಾನ ಏನೆಂದು ತಿಳಿಸಲಾಗುವುದು ಎಂದರು.
ಇನ್ನು ಕಾಂಗ್ರೆಸ್ ಫ್ಯೂಸ್ ಹೋಗಿದೆ ಎನ್ನುವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿಧಾನಸಭಾ ಚುನಾವಣೆ ಬರಲಿ. ನಾಡಿನ ಜನ ಯಾರ ಫ್ಯೂಸ್ ಕಿತ್ತಾಕುತ್ತಾರೆ ಎನ್ನುವುದು ಗೊತ್ತಾಗುತ್ತದೆ. ನಾಲಗೆಗೂ ಮತ್ತು ಮೆದುಳಿಗೂ ಸಂಪರ್ಕವೇ ಕಟ್ ಆಗಿರುವ ಈಶ್ವರಪ್ಪ ಹೇಳಿಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.