ನ್ಯೂಸ್

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ: ಎಚ್​ಡಿಕೆ ಘೋಷಣೆ

ಮಾಲೂರು: ಜೆಡಿಎಸ್​ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಘೋಷಿಸಿದರು.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮಕ್ಕೆ ಭಾನುವಾರ ಜೆಡಿಎಸ್​ನ ಪಂಚರತ್ನ ರಥಯಾತ್ರೆ ತಲುಪಿತು. ರಥಯಾತ್ರೆಯ ದಾರಿಯುದ್ದಕ್ಕೆ ಎಚ್​ಡಿಕೆ ಅವರ ಬಳಿ ರೈತ ಮಹಿಳೆಯರು, ಸ್ತ್ರೀ ಸಂಘಗಳ ಸದಸ್ಯರು ಸಾಲ ಮನ್ನ ಮಾಡುವಂತೆ ಕಷ್ಟ ಹೇಳಿಕೊಂಡಿದ್ದರು.

ಮಾಸ್ತಿ ಗ್ರಾಮದಲ್ಲಿ ಮಾತನಾಡಿದ ಎಚ್​ಡಿಕೆ, 2018ರಲ್ಲಿ ಜೆಡಿಎಸ್​ಗೆ ಬಹುಮತ ಸಿಕ್ಕಿ ಸರ್ಕಾರ ರಚಿಸಿದ್ದರೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವ ಉದ್ದೇಶವಿತ್ತು. ಆಗ ಮೈತ್ರಿ ಸರ್ಕಾರದಲ್ಲಿ ರೈತರ 25 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದೆವು. ಅದಾದ ಬಳಿಕ ಸ್ತ್ರೀಶಕ್ತಿ ಸಂಘಗಳ 1 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ತೀರ್ಮಾನಿಸಿದ್ದೆ. ಅಷ್ಟರಲ್ಲಿ ಸರ್ಕಾರವನ್ನು ಕೆಡವಿದ್ದರಿಂದ ಸಾಲಮನ್ನಾ ಮಾಡಲಾಗಲಿಲ್ಲ. ಜೆಡಿಎಸ್​ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.

ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಲೂರು ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 220 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದರು.

ಮಾಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಜಿ.ಇ. ರಾಮೇಗೌಡ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದರು. ರಾತ್ರಿ ಮಾಲೂರು ಪಟ್ಟಣದಲ್ಲಿ ಕುಮಾರಸ್ವಾಮಿ ರೋಡ್​ ಶೋ ನಡೆಸಿದರು.

ಶಿವಾರಪಟ್ಟಣದಲ್ಲಿ ವಾಸ್ತವ್ಯ: ಶಿವಾರಪಟ್ಟಣಕ್ಕೆ ರಾತ್ರಿ ಆಗಮಿಸಿದ್ದ ಯಾತ್ರೆಯನ್ನು ಗ್ರಾಮಸ್ಥರು ಅದ್ದೂರಿ ಸ್ವಾಗತ ಮಾಡಿದರು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಗ್ರಾಮವಾಸ್ತವ್ಯ ಮಾಡಿದರು.