ನ್ಯೂಸ್

ದೊಡ್ಡ ಒತ್ತುವರಿದಾರರಿಗೆ ಬರೆ, ಸಣ್ಣವರಿಗಿಲ್ಲ ವರಿ: ಸಚಿವ ಈಶ್ವರ ಖಂಡ್ರೆ ಭರವಸೆ; ಕಸ್ತೂರಿರಂಗನ್ ವರದಿ ಜಾರಿಗೆ ಸಮತೋಲಿತ ತೀರ್ಮಾನ

ಬೆಂಗಳೂರು: ಅರಣ್ಯ ಸಚಿವರಾಗಿ ಎರಡು ತಿಂಗಳು ಅವಧಿ ಪೂರೈಸಿರುವ ಈಶ್ವರ ಖಂಡ್ರೆ ಶುಕ್ರವಾರ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು. ಇಲಾಖೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನೂ ಸೂಚ್ಯವಾಗಿ ತಿಳಿಸಿದರು. ಅರಣ್ಯ ಇಲಾಖೆಯ ಕಾರ್ಯವೈಖರಿಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗೆಗೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಪ್ರಮುಖವಾಗಿ ಕಸ್ತೂರಿ ರಂಗನ್ ವರದಿ ಕುರಿತು ಹೊಸ ಸರ್ಕಾರದ ನಿಲುವೇನು ಮತ್ತು ಯಾವ ರೀತಿ ಹೆಜ್ಜೆ ಇಡಬಹುದೆಂಬುದನ್ನು ಸೂಚ್ಯವಾಗಿ ತಿಳಿಸಿದರು.

  • ಅರಣ್ಯ ಸಚಿವರಾಗಿದ್ದೀರಿ, ಈ ಇಲಾಖೆಯ ಜವಾಬ್ದಾರಿ ಹೊತ್ತ ಬಳಿಕ ಏನೆಲ್ಲ ಕನಸುಗಳಿವೆ?

ಭೂತಾಯಿ ರಕ್ಷಣೆಗೆ ಒಂದು ಅವಕಾಶ ಸಿಕ್ಕಿದೆ. ಹವಾಮಾನ ವೈಪರೀತ್ಯ, ತಾಪಮಾನ, ಮಾಲಿನ್ಯದಿಂದ ಆಗುವ ಅನಾಹುತ ತಪ್ಪಿಸಲು ಅರಣ್ಯ ಸಂರಕ್ಷಣೆ ಅತೀ ಮುಖ್ಯ, ಇಂತಹ ಜವಾಬ್ದಾರಿ ನನಗೆ ಸಿಕ್ಕಿದೆ. ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ.

  • ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರದ ನಿಲುವೇನು?

ಅರಣ್ಯ ಒತ್ತುವರಿಯಲ್ಲಿ ಎರಡು ರೀತಿಯದ್ದಿದೆ. ದೊಡ್ಡ ಮಟ್ಟದ ಒತ್ತುವರಿ ಒಂದು ಕಡೆಯಾದರೆ ಜೀವನೋಪಾಯಕ್ಕೆ ಒತ್ತುವರಿ ಮಾಡಿಕೊಂಡವರು ಇನ್ನೊಂದು ಕಡೆ. ಈ ದೊಡ್ಡ ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಈಗ ಒತ್ತುವರಿದಾರರಲ್ಲಿ ಯಾವ ರೀತಿ ಭಯ ಬಂದಿದೆ ಎಂದರೆ ಸ್ವಯಂ ಪ್ರೇರಿತವಾಗಿ ತೆರವು ಮಾಡುತ್ತಿದ್ದಾರೆ.ಬಹಳ ಹಿಂದೆ ಕಂದಾಯ ಇಲಾಖೆ ಬೇಜವಾಬ್ದಾರಿಯಿಂದ ಈ ರೀತಿ ಆಗಿದೆ. ಬಹುಕಾಲದಿಂದ ಕಂದಾಯ, ಅರಣ್ಯ ಇಲಾಖೆ ಸಮೀಕ್ಷೆ ಆಗಿಲ್ಲ. ಮೂರು ನಾಲ್ಕು ತಲೆಮಾರಿನಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ಅವರನ್ನು ರಕ್ಷಿಸಲು ಕಾಯ್ದೆ ಇದೆ. ಆದರೂ ಕಾರ್ಯಗತ ಆಗುತ್ತಿಲ್ಲ. ಸರ್ವೆಯಾದರೆ ಖಾಸಗಿ ಭೂಮಿ ಯಾವುದು, ಅರಣ್ಯ ಭೂಮಿ ಎಷ್ಟಿದೆ, ಕಂದಾಯ ಭೂಮಿ ಎಷ್ಟೆಂದು ಗೊತ್ತಾಗಿ ಸಮಸ್ಯೆ ಬಗೆಹರಿಸಿ ಶಾಶ್ವತ ಪರಿಹಾರ ಕೊಡಲು ಸಾಧ್ಯವಿದೆ.

  • ಶರಾವತಿ ಯೋಜನೆ ಸಂತ್ರಸ್ತರಿಗೆ ಏನು ಪರಿಹಾರ?

ಶರಾವತಿ ಯೋಜನೆಗೆ ಸಂಬಂಧಿಸಿದಂತೆ ಪುನರ್ವಸತಿಗೆ ಜಮೀನು ನೀಡಲಾಗಿತ್ತು. ಆದರೆ ಪ್ರಕರಣ ಕೋರ್ಟ್​ಗೆ ಹೋಗಿದೆ. ಶಾಶ್ವತ ಪರಿಹಾರ ನೀಡಲು ಸಮಿತಿ ರಚಿಸಲಾಗಿದೆ. ಸುಪ್ರಿಂಕೋರ್ಟ್​ಗೆ ಮಧ್ಯಂತರ ಅರ್ಜಿ ಹಾಕಬೇಕೆಂದು ಕೇಂದ್ರ ಸರ್ಕಾರ ಅಭಿಪ್ರಾಯ ನೀಡಿದೆ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕೊಡಲು ಹದಿನೈದು ದಿನಗಳಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲು ಸಲ್ಲಿಸಲು ಸೂಚನೆ ಕೊಡಲಾಗಿದೆ.

  • ತಮ್ಮ ಇಲಾಖೆಗೆ ಸಿಬ್ಬಂದಿ ಕೊರತೆ ಬಹಳ ಇದ್ದಂತಿದೆಯಲ್ಲ?

ನಿಜ, ಸಿಬ್ಬಂದಿ ಕೊರತೆ ಸಾಕಷ್ಟಿದೆ. ಖಾಲಿ ಹುದ್ದೆ ಭರ್ತಿ ಮಾಡಲು ಪ್ರಸ್ತಾವನೆ ಕೊಡಲಾಗಿದೆ. ಕೆಳಹಂತದಲ್ಲಿ ಸುಮಾರು ಹುದ್ದೆ ಖಾಲಿ ಇದೆ. ಭರ್ತಿ ಮಾಡಿಕೊಳ್ಳುವ ಅವಶ್ಯಕತೆಯೂ ಇದೆ. ತಕ್ಷಣಕ್ಕೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದು, ಶಾಶ್ವತವಾಗಿ ಭರ್ತಿ ಮಾಡಿದರೆ ಉತ್ತರದಾಯಿ ಆಗಿರುತ್ತಾರೆ.

  • ರಾಜ್ಯದ ಹುಲಿ ಲೆಕ್ಕಾಚಾರ ಏನು?

ರಾಜ್ಯದಲ್ಲಿ ಐದು ಹುಲಿ ಸಂರಕ್ಷಣೆ ಧಾಮಗಳಿವೆ. ಒಟ್ಟಾರೆ ರಾಜ್ಯದಲ್ಲಿ 435 ಹುಲಿಗಳು ಕ್ಯಾಮರಾ ಮೂಲಕ ಕ್ಯಾಪ್ಚರ್ ಮಾಡಲಾಗಿದೆ. ಹಿಂದಿನ ನಾಲ್ಕು ವರ್ಷದಲ್ಲಿ 31 ಹುಲಿಗಳು ಜಾಸ್ತಿ ಆಗಿದೆ. ನಮ್ಮಲ್ಲಿ ಆಧುನಿಕವಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಸರ್ವೆ ಮಾಡಲಾಗಿದೆ. ಅತಿ ಹೆಚ್ಚು ಹುಲಿ ನಮ್ಮಲ್ಲಿ ಇದ್ದು, ಒಳ್ಳೆ ರೀತಿ ಹುಲಿ ಸಂರಕ್ಷಣೆ ನಡೆಯುತ್ತಿದೆ.

  • ಮಾಲಿನ್ಯ ನಿಯಂತ್ರಣ ಮಂಡಳಿ ಭ್ರಷ್ಟಾಚಾರದ ಕತೆ ಏನು?

ಮಾಲಿನ್ಯ ನಿಯಂತ್ರಣ ಮಂಡಳಿ ಸುಧಾರಣೆ ಅವಶ್ಯಕತೆ ಇದೆ. ಇ ವೇಸ್ಟ್, ಕೆರೆ ಕಲುಷಿತ ಸಮಸ್ಯೆ ಸಾಕಷ್ಟು ಇದೆ. ಮಾಲಿನ್ಯ ತಡೆಗಟ್ಟಲು ಕಾಯ್ದೆ ಕಟ್ಟುನಿಟ್ಟಾಗಿ ತರಬೇಕು. ಮಂಡಳಿ ಶುದ್ಧೀಕರಣ ಕೆಲಸ ಮಾಡುತ್ತೇವೆ.

  • ಪ್ಲಾಸ್ಟಿಕ್ ಸಮಸ್ಯೆ ಪರಿಹಾರವೇನು?

ಒಂದು ಬಾರಿಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗೆ ನಿಷೇಧ ಹೇರಲಾಗಿದೆ. ಬೇರೆ ರಾಜ್ಯದಿಂದ ನಮ್ಮಲ್ಲಿ ಉತ್ಪಾದನೆಯಾಗಿ ಬರುತ್ತಿದೆ. ಅದನ್ನು ತಡೆಯಲು ಕ್ರಮಕೈಗೊಳ್ಳಲಾಗುತ್ತದೆ. ಅದೇ ರೀತಿ ಐದು ನಗರಗಳನ್ನು ಮುಂದಿನ ಒಂದು ವರ್ಷದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲಾಗುತ್ತದೆ. ಸಾಗಾಣಿಕೆ, ಉತ್ಪಾದನೆ, ಬಳಕೆಯಾಗುವಲ್ಲಿ ದಾಳಿಮಾಡಿ ದಂಡ ಹಾಕಿ, ಜಾಗೃತಿ ಮೂಡಿಸಿದರೆ ಇದು ಸಾಧ್ಯವಾಗಲಿದೆ.

  • ಅಕ್ರಮ ಜಲ ವಿದ್ಯುತ್ ಯೋಜನೆಗಳ ಬಗ್ಗೆ ಕ್ರಮವೇನು?

ಈ ಬಗ್ಗೆ ಕೆಲವೊಂದು ದೂರು ಇದೆ. ಕೆಲವು ಕಡೆ ಅಕ್ರಮವಾಗಿ ವಿಂಡ್ ಮಿಲ್ ಕೂಡ ಹಾಕಿದ್ದಾರೆ. ಅದರ ಮಾಹಿತಿ ತರಿಸುತ್ತಿದ್ದೇನೆ. ವರದಿ ಬಂದ ನಂತರ ಕ್ರಮಕೈಗೊಳ್ಳುತ್ತೇನೆ. ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ.

  • ಪ್ರಾಣಿ- ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಪರಿಹಾರವೇನು?

ಆನೆಯದ್ದೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ರಾಜ್ಯದಲ್ಲಿ ಆರುಸಾವಿರ ಆನೆ ಇದ್ದು ಪ್ರತಿ ದಿನ ಅವು 40ರಿಂದ 50 ಕಿಮೀನಷ್ಟು ಸಂಚರಿಸುತ್ತವೆ. ನಗರೀಕರಣ ಹೆಚ್ಚುತ್ತಿರುವುದರಿಂದ ಅವು ಜನವಸತಿಯತ್ತ ಬರುತ್ತಿದೆ. ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಮತ್ತಿತರ ಕಡೆ ಆನೆ ಹಾವಳಿ ಹೆಚ್ಚಿದೆ. ಈ ಹಾವಳಿ ತಪ್ಪಿಸಲು 641 ಕಿಮೀ ರೈಲ್ವೆ ಬ್ಯಾರಿಕೇಡ್ ಹಾಕಲು ಯೋಜನೆ ಜಾರಿಯಲ್ಲಿದ್ದು, ಪ್ರಸ್ತುತ 310 ಕಿಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನೂ 331 ಕಿಮೀ ಯೋಜನೆ ಕಾರ್ಯಗತವಾಗಬೇಕಿದೆ, ಇದಕ್ಕಾಗಿ ಬಜೆಟ್​ನಲ್ಲಿ 300 ಕೋಟಿ ರೂ. ನೀಡುವಂತೆ ಕೇಳಲಾಗಿತ್ತು. ಈ ಹಣ ಕೊಟ್ಟಿದ್ದರೆ ಎರಡು ವರ್ಷದಲ್ಲಿ ಪೂರ್ಣಗೊಳಿಸಬಹುದಿತ್ತು. ಪ್ರಸ್ತುತ 120 ಕೋಟಿ ರೂ. ಅನುದಾನವಿದ್ದು, ಇದರಲ್ಲಿ 80 ಕಿಮೀ ಬ್ಯಾರಿಕೇಡ್ ಹಾಕಲಾಗುತ್ತದೆ. ಇತ್ತೀಚೆಗೆ ಆನೆ ಹಾವಳಿಯಿಂದ ನಾಲ್ಕು ಜನ ಮೃತರಾದರು. ತಕ್ಷಣವೇ 45 ಜನರ ತಂಡದ ಆನೆ ಕಾರ್ಯಪಡೆ ರಚಿಸಿದ್ದು, ವಾಹನ ಸಲಕರಣೆ ಒದಗಿಸಲಾಗಿದೆ. ಈ ಕಾರ್ಯಪಡೆ ಜನವಸತಿಯತ್ತ ಬರುವ ಆನೆಗಳನ್ನು ವಾಪಸ್ ಕಾಡಿಗೆ ಕಳಿಸಲು ವ್ಯವಸ್ಥೆ ಮಾಡುತ್ತಿದೆ.

ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ

ಸರ್ಕಾರ ಘೊಷಿಸಿರುವ ಗ್ಯಾರಂಟಿಗಳ ಜಾರಿ ನಡುವೆಯೂ ಅಭಿವೃದ್ಧಿಗೆ ಅನುದಾನದ ಕೊರತೆ ಆಗುವುದಿಲ್ಲ. ಸಂಪನ್ಮೂಲ ಕ್ರೋಡೀಕರಣ, ಸೋರಿಕೆ ತಡೆಗಟ್ಟುವಿಕೆ, ಜಿಎಸ್​ಟಿ ವಂಚನೆಗೆ ಕಡಿವಾಣ, ಅಬಕಾರಿ ಸುಂಕ ಏರಿಕೆ ಮಾಡುವ ಮೂಲಕ ಆದಾಯ ಸಂಗ್ರಹಿಸಲು ಸಾಧ್ಯತೆ ಇದೆ. ಗ್ಯಾರಂಟಿಗಳಿಗೆ ಈ ವರ್ಷ ಅಂದಾಜು 33 ಸಾವಿರ ಕೋಟಿ ರೂ. ವೆಚ್ಚ ವಾಗುತ್ತದೆ. ಜಲಸಂಪನ್ಮೂಲ ಇಲಾಖೆಗೆ ತುಸು ಹಣ ಕೊರತೆ ಆಗಬಹುದು. ಉಳಿದಂತೆ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

  • ಕಸ್ತೂರಿ ರಂಗನ್ ವರದಿ ಬಗ್ಗೆ ಹೊಸ ಸರ್ಕಾರದ ನಿಲುವೇನು?

ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಹತ್ತುಹನ್ನೊಂದು ಜಿಲ್ಲೆ ಬರಲಿದೆ. ಅಲ್ಲಿನವರಿಗೆ ಬದುಕಿನ ಬಗ್ಗೆ ಭಯ, ಶಂಕೆ ಇದೆ. ಆ ವರದಿ ಇನ್ನೂ ಅಧಿಸೂಚನೆ ಆಗಿಲ್ಲ.ಈಗ ತಾನೆ ಸಂಜಯ್ ಕುಮಾರ್ ಸಮಿತಿ ಭೇಟಿ ಮಾಡಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ. ಆಯಾ ಭಾಗದ ಸ್ಥಳೀಯ ಜನರಿಗೆ ತೊಂದರೆ ಆಗದಂತೆ, ಸ್ಥಳೀಯ ಜನರಿಗೆ ಅವರಿಗೆ ಉಪಯೋಗವಾಗುವ ರೀತಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಪಶ್ಚಿಮಘಟ್ಟದ ಉಳಿವು ಕೂಡ ಅತೀ ಮುಖ್ಯ ಮತ್ತು ಮಹತ್ವದ್ದು. ರಾಜ್ಯ ಸರ್ಕಾರದಲ್ಲಿ ಯಾವುದೇ ರೀತಿ ತೀರ್ಮಾನ ಆಗಿಲ್ಲ. ಸಂಪುಟ ಉಪ ಸಮಿತಿ ರಚನೆಯಾಗಿದ್ದು, ಅಲ್ಲಿ ಇದೆಲ್ಲ ವಿಷಯ ಬರಲಿದೆ. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷದಲ್ಲಿ ಏನು ಬದಲಾವಣೆ ಆಗಿದೆ ನೋಡಬೇಕು. ನಾವು ಅಂತಿಮ ತೀರ್ಮಾನ ಕೊಡಬೇಕಾಗುತ್ತದೆ. ಸಿಎಂ ಜತೆ ಚರ್ಚೆ ಮಾಡಿ, ಜನರ ಜೀವನ, ಪಶ್ಚಿಮ ಘಟ್ಟ ಎಲ್ಲವನ್ನೂ ಸಮನ್ವಯ ಮಾಡಿಕೊಂಡು ತೀರ್ಮಾನ ಮಾಡುತ್ತೇವೆ. ಕಸ್ತೂರಿರಂಗನ್ ವರದಿಯಲ್ಲಿನ ನಿಯಮ ಬದಲಾವಣೆ ಮಾಡಬೇಕೆಂದು ಆ ಭಾಗದ ಜನಪ್ರತಿನಿಧಿಗಳ ಆಗ್ರಹವಾಗಿದೆ. ಯಾವುದೇ ಕಾನೂನು ಜಾರಿ ಮಾಡಲು ಜನರ ಒಪ್ಪಿಗೆ ಮುಖ್ಯ. ಜನರಲ್ಲಿರುವ ಗೊಂದಲ ನಿವಾರಿಸಿ, ಜನರನ್ನು ಒಪ್ಪಿಸಿದರೆ ಸರಿ ಹೋಗುತ್ತದೆ.