ನವದೆಹಲಿ: ದೇಶದಲ್ಲಿ ಲಾಕ್ಡೌನ್ ಮೊದಲನೇ ಹಂತದಲ್ಲಿ ಸಡಿಲಿಕೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾತನಾಡಿದರು. ಭಾರತೀಯ ಉದ್ಯಮದ ಒಕ್ಕೂಟ(CII) ಎರಡನೇ ಅಧಿವೇಶನದಲ್ಲಿ Getting Growth Back (ಮರಳಿ ಬೆಳವಣಿಗೆಯತ್ತ) ಎಂಬ ವಿಷಯದ ಬಗ್ಗೆ ಮಾತನಾಡಿದರು.
ಭಾರತದ ಸಾಮರ್ಥ್ಯ ಮತ್ತು ಬಿಕ್ಕಟ್ಟು ನಿರ್ವಹಣೆಯ ಬಗ್ಗೆ ನನಗೆ ನಂಬಿಕೆ ಇದೆ. ಈ ದೇಶದ ಪ್ರತಿಭೆ ಮತ್ತು ತಂತ್ರಜ್ಞಾನದ ಮೇಲೆ ನನಗೆ ನಂಬಿಕೆ ಇದೆ. ಭಾರತದ ಆವಿಷ್ಕಾರ ಹಾಗೂ ಬುದ್ಧಿವಂತಿಕೆಯನ್ನು ನಂಬುತ್ತೇನೆ ಹಾಗೇ ಈ ದೇಶದ ರೈತರು, ಉದ್ಯಮಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ನನಗೆ ಅಪಾರ ವಿಶ್ವಾಸವಿದೆ ಎಂದು ಮೋದಿಯವರು ಹೇಳಿದರು.
ಕರೊನಾ ವೈರಸ್ ನಮ್ಮ ಬೆಳವಣಿಗೆಯ ವೇಗವನ್ನು ತಗ್ಗಿಸಬಹುದು. ಆದರೆ ಭಾರತಕ್ಕೆ ಅದನ್ನು ಮೀರುವ ಶಕ್ತಿ ಇದೆ. ಇವತ್ತು ನಮ್ಮ ದೇಶ ಲಾಕ್ಡೌನ್ನಿಂದ ಅನ್ಲಾಕ್ನ ಮೊದಲನೇ ಹಂತದವರೆಗೆ ಬಂದು ನಿಂತಿದೆ. ಈ ಅನ್ಲಾಕ್-1ರಲ್ಲಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಶುರುವಾಗಿವೆ. ಹಾಗೇ ಮೊದಲಿನ ವೇಗದಲ್ಲಿಯೇ ಆರ್ಥಿಕತೆ ಬೆಳೆಯಬೇಕು. ಅದಕ್ಕಾಗಿ ಉದ್ದೇಶ, ಒಳಗೊಳ್ಳುವಿಕೆ, ಹೂಡಿಕೆ, ಮೂಲಸೌಕರ್ಯ, ಆವಿಷ್ಕಾರಗಳು ಅತ್ಯಗತ್ಯ ಎಂದು ಹೇಳಿದರು.
ಕರೊನಾದಿಂದಾಗಿ ನೆಲಕಚ್ಚಿರುವ ಆರ್ಥಿಕತೆಯನ್ನು ಮತ್ತೆ ಬಲಪಡಿಸಬೇಕು. ಸದ್ಯಕ್ಕೆ ಇದೇ ನಮ್ಮ ಆದ್ಯತೆ. ಕರೊನಾದೊಂದಿಗೆ ಹೋರಾಡುತ್ತ, ದೇಶವನ್ನು ಆರ್ಥಿಕವಾಗಿ ಸದೃಢಮಾಡಬೇಕು. ಹಾಗಾಗಿಯೇ ನಮ್ಮ ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅದು ಎಲ್ಲ ವಲಯಗಳಿಗೆ ಸಹಾಯಕವಾಗಲಿದೆ ಎಂದರು.
ಒಂದು ಕಡೆ ದೇಶದ ಜನರ ಜೀವ, ಆರೋಗ್ಯ ಕಾಪಾಡಬೇಕು. ಮತ್ತೊಂದೆಡೆ ಆರ್ಥಿಕತೆಯನ್ನು ಸಬಲಗೊಳಿಸಬೇಕು. ಸಂದರ್ಭ ಹೀಗಿರುವಾಗ ಸಿಐಐ (ಉದ್ಯಮ ಒಕ್ಕೂಟ) ಮರಳಿ ಬೆಳವಣಿಗೆ ಎಂಬ ವಿಷಯದ ಬಗ್ಗೆ ಮಾತನಾಡಿ, ಆ ನಿಟ್ಟಿನಲ್ಲಿ ಕಾರ್ಯರೂಪಿಸಲು ಮುಂದಾಗಿದೆ. ಭಾರತದ ಉದ್ಯಮ ಕ್ಷೇತ್ರದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ತಬ್ಲಿಘಿಗಳಿಗೆ ಬಾಯಿಗೆ ಬಂದಂತೆ ಬೈದ ವೈದ್ಯೆ; ವಿವಾದ ಆಗುತ್ತಿದ್ದಂತೆ ‘ನನಗೆ ಅವರೆಂದರೆ ತುಂಬ ಪ್ರೀತಿ’ ಎಂದರು…
ದೇಶದ ಬಡವರು ಹಾಗೂ ವಲಸೆ ಕಾರ್ಮಿಕರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 53,000 ಕೋಟಿ ರೂ. ವೆಚ್ಚದಲ್ಲಿ ಉಚಿತ ರೇಷನ್ ನೀಡಲಾಗಿದೆ. ಖಾಸಗಿ ಉದ್ಯಮಿಗಳಿಗೆ ಉತ್ತಮ ಅವಕಾಶ, ಅನುಕೂಲ ಕಲ್ಪಿಸಿಕೊಡಲು ಸದಾ ಪ್ರಯತ್ನಿಸಿ, ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ. ಕರೊನಾ ಬಿಕ್ಕಟ್ಟು, ಲಾಕ್ಡೌನ್ ಸಂದರ್ಭದಲ್ಲಿ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದ ಸಾಧನೆ ಅತ್ಯುತ್ತಮವಾದದ್ದು ಎಂದು ತಿಳಿಸಿದರು.