Strange Facts : ಸುಮಾರು 30 ಗಂಟೆಗಳ ಕಾಲ ನಿಮಿರುವಿಕೆಯಿಂದಾಗಿ ತುಂಬಾ ಪರದಾಡಿದ ವ್ಯಕ್ತಿಯೊಬ್ಬನಿಗೆ ವೈದ್ಯರ ಎಡವಟ್ಟಿನ ಬಳಿಕ ಭಾರಿ ಮೊತ್ತದ ಪರಿಹಾರವನ್ನು ನೀಡಲಾಗಿದೆ. ಈ ವಿಚಿತ್ರ ಘಟನೆ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದಿದ್ದು, 4 ವರ್ಷಗಳ ಹಿಂದಿನ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ.
ಸ್ಪ್ಯಾನಿಷ್ ಪತ್ರಿಕಾ ವರದಿಗಳ ಪ್ರಕಾರ, ಸ್ಪೇನ್‌ನ ವೆಲೆನ್ಸಿಯಾ ಮೂಲದ 36 ವರ್ಷದ ವ್ಯಕ್ತಿಯೊಬ್ಬನಿಗೆ ತನ್ನ ಮರ್ಮಾಂಗದ ನಿಮಿರುವಿಕೆ ಗಂಟೆಗಳ ಕಾಲ ತಗ್ಗಲಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಕಾದರೂ ಯಾವುದೇ ಬದಲಾವಣೆ ಕಾಣದಿದ್ದಾಗ ಆತಂಕಗೊಂಡ ಆ ವ್ಯಕ್ತಿ, ಕೂಡಲೇ ಅಲ್ಬೈಡಾದ ಆರೋಗ್ಯ ಕೇಂದ್ರದ ಮುಂದೆ ಹಾಜರಾದರು.
ಹೆಸರು ಬಹಿರಂಗಪಡಿಸದ ಆ ವ್ಯಕ್ತಿಗೆ ಪ್ರಿಯಾಪಿಸಂ ಇರುವುದು ಪತ್ತೆಯಾಯಿತು. ಅಂದಹಾಗೆ ಪ್ರಿಯಾಪಿಸಂ ಎಂದರೆ, ಮೇಯೊ ಕ್ಲಿನಿಕ್ ನೋವಿನಿಂದ ಕೂಡಿದ, ದೀರ್ಘಕಾಲದ ನಿಮಿರುವಿಕೆ ಎಂದು ಹೇಳಲಾಗುತ್ತದೆ. ಇದು ಯಾವಾಗಲೂ ಲೈಂಗಿಕ ಪ್ರಚೋದನೆಯಿಂದ ಉಂಟಾಗುವುದಿಲ್ಲ ಆದರೆ, ಕೆಲವೊಮ್ಮೆ ಆ ರೀತಿ ಆಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇಂತಹ ಸಮಸ್ಯೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಸೇರಿದಂತೆ ಇನ್ನಿತರ ತೊಡಕುಗಳು ಉಂಟಾಗಬಹುದು. ಮರ್ಮಾಂಗದ ರಕ್ತನಾಳಗಳಿಂದ ರಕ್ತ ಹೊರಹೋಗಲು ಸಾಧ್ಯವಾಗದಿದ್ದಾಗ ಈ ರೀತಿ ಆಗುತ್ತದೆ. ಇದರಿಂದಾಗುವ ಅಂಗಾಂಶ ಹಾನಿ ಅಥವಾ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಂತಹ ಇತರ ತೊಡಕುಗಳನ್ನು ತಡೆಗಟ್ಟಲು ತ್ವರಿತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.
ಸಮಸ್ಯೆ ಏನೆಂಬುದು ಗೊತ್ತಾದ ಬಳಿಕವೂ ಆ ವ್ಯಕ್ತಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕಲಿಲ್ಲ. ಸಮಸ್ಯೆ ಪ್ರಾರಂಭವಾದ ಸುಮಾರು 20 ಗಂಟೆಗಳ ನಂತರ ತಮ್ಮ ಪತ್ನಿಯೊಂದಿಗೆ ಆ ವ್ಯಕ್ತಿ ಎರಡು ಬಾರಿ ಒಂಟಿನಿಯೆಂಟ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಮೂತ್ರಶಾಸ್ತ್ರಜ್ಞರನ್ನು ಭೇಟಿಯಾಗಲು ಸ್ವಲ್ಪ ಕಾಯಾಬೇಕಾಗುತ್ತದೆ ಎಂದು ಹೇಳಿದಾಗ, ಅಲ್ಲಿಂದ ಕ್ಸಾಟಿವಾದ ಲೂಯಿಸ್ ಅಲ್ಕಾನಿಸ್ ಆಸ್ಪತ್ರೆಗೆ ಹೋದೆ ಎಂದು ಸಮಸ್ಯೆಗೀಡಾದ ವ್ಯಕ್ತಿ ಹೇಳಿದ್ದಾರೆ.
ಕ್ಸಾಟಿವಾದ ಲೂಯಿಸ್ ಅಲ್ಕಾನಿಸ್ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆ ವ್ಯಕ್ತಿಗೆ ಜ್ವರ ಕೂಡ ಕಾಣಿಸಿಕೊಂಡಿತು. ಕೆಲವೊಮ್ಮೆ ಪ್ರಿಯಾಪಿಸಂ ಜೊತೆಗೆ ಜ್ವರ ಸಹ ಕಾಣಿಸಿಕೊಳ್ಳಬಹುದು. ವೈದ್ಯಕೀಯ ಶಿಷ್ಟಾಚಾರದ ಪ್ರಕಾರ, ವೈದ್ಯರು ಆ ವ್ಯಕ್ತಿಯ ಮರ್ಮಾಂಗದಿಂದ ರಕ್ತವನ್ನು ಹೊರತೆಗೆದು, ಕೆಲವು ದಿನಗಳ ನಂತರ ಕೃತಕ ಅಂಗವನ್ನು ಅಳವಡಿಸಿಕೊಳ್ಳಲು ಅಪಾಯಿಂಟ್ಮೆಂಟ್ ಪಡೆದರು. ಇದು ಆ ವ್ಯಕ್ತಿಯ ನಿಮಿರುವಿಕೆಯನ್ನು ಮರಳಿ ಪಡೆಯಲು, ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳಲು ಮತ್ತು ಪ್ರಿಯಾಪಿಸಂ ನೋವನ್ನು ತ್ವರಿತವಾಗಿ ನಿವಾರಿಸಲು ಸಹಾಯ ಮಾಡುವ ಅರೆ-ಗಟ್ಟಿಯಾದ ಇಂಪ್ಲಾಂಟ್ ಆಗಿದೆ.
ಆದರೆ, ರೋಗಿಯು ತನ್ನ ಕೃತಕ ಅಂಗವು ಹೊರಬಂದಿದ್ದು 'ಸರಿಯಾಗಿ ಹೊಂದಿಕೊಳ್ಳಲಿಲ್ಲ' ಎಂದು ಹೇಳಿದ್ದರಿಂದ ಎರಡನೇ ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಇದರಿಂದ ಅಸಮಾಧಾನಗೊಂಡ ಆ ವ್ಯಕ್ತಿ, ನ್ಯಾಯಾಲಯದ ಮೊರೆ ಹೋದರು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಾಗ, ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ತನಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಮತ್ತು ನಿಮಿರುವಿಕೆಯನ್ನು ಪಡೆಯುವಲ್ಲಿ ಮತ್ತು ನಿರ್ವಹಿಸುವಲ್ಲಿ ನಿರಂತರ ನೋವಿನಿಂದ ಬಳಲುತ್ತಿದ್ದೇನೆ ಎಂದು ಅರ್ಜಿದಾರರು ಆರೋಪಿಸಿದರು.
ಸದ್ಯ ಆ ವ್ಯಕ್ತಿಯು ಶಾಶ್ವತ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಎಡಗಾಲಿನಲ್ಲಿ ನೋವು ಮತ್ತು ಬಲಗೈಯಲ್ಲಿ ಸೂಕ್ಷ್ಮತೆ ಮತ್ತು ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ದಿ ಆಲಿವ್ ಪ್ರೆಸ್ ವರದಿ ಮಾಡಿದೆ. ನ್ಯಾಯಾಲಯದ ಸೂಚನೆಯಂತೆ ವೆಲೆನ್ಸಿಯಾವನ್ನು ಒಳಗೊಳ್ಳುವ ಪ್ರಾದೇಶಿಕ ಸರ್ಕಾರವು ಆ ವ್ಯಕ್ತಿಗೆ 50,000 ಡಾಲರ್ (43 ಲಕ್ಷ ರೂಪಾಯಿ) ಮತ್ತು ಅವನ ಹೆಂಡತಿಗೆ 'ನೈತಿಕ' ಪರಿಹಾರವಾಗಿ 5,000 ಡಾಲರ್ (4 ಲಕ್ಷ ರೂಪಾಯಿ) ಪಾವತಿಸಲು ಆದೇಶಿಸಿದೆ.
ಅಂದಹಾಗೆ ಇದು ನಡೆದಿದ್ದು, ನಾಲ್ಕು ವರ್ಷಗಳ ಹಿಂದೆ. ನ್ಯಾಯಾಯಲ ಇದೀಗ ಪರಿಹಾರದ ತೀರ್ಪು ನೀಡಿದ್ದು, ಈ ಬಗ್ಗೆ ಮಾತನಾಡಿರುವ ದಂಪತಿ, ತಮ್ಮ ಹಕ್ಕು ಸಾಧಿಸಲು ನಾಲ್ಕು ವರ್ಷಗಳ ಕಾಲ 'ದೀರ್ಘ' ಹೋರಾಟವನ್ನು ಸಹಿಸಿಕೊಂಡಿದ್ದೇವೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಭಾಗಿಯಾಗದ ಮೂತ್ರಶಾಸ್ತ್ರಜ್ಞ ಜಾರ್ಜ್ ಸ್ಯಾಂಚೆಜ್ ಮಾತನಾಡಿ, ನಾಲ್ಕು ಅಥವಾ ಐದು ಗಂಟೆಗಳ ಕಾಲ ಪ್ರಿಯಾಪಿಸಂ ಶಿಶ್ನ ಅಂಗಾಂಶಕ್ಕೆ ಹಾನಿಯನ್ನುಂಟುಮಾಡಬಹುದು ಮತ್ತು 20 ಗಂಟೆಗಳ ನಂತರವೂ ಅದೇ ರೀತಿ ಇದ್ದರೆ ಅಪಾಯವು ಹೆಚ್ಚಾಗುತ್ತದೆ. ಹಲವು ಗಂಟೆಗಳ ಕಾಲ ನಿಮಿರುವಿಕೆ ಮುಂದುವರಿದರೆ, ಅದಕ್ಕಿರುವುದು ಒಂದೇ ಪರಿಹಾರ. ಅದೇನೆಂದರೆ, ಶಿಶ್ನದಲ್ಲಿರುವ ಎರಡು ಕೊಳವೆಗಳನ್ನು ಮುರಿಯುವುದು. ಅವುಗಳನ್ನು ಕಾರ್ಪೋರಾ ಕ್ಯಾವರ್ನೋಸಾ ಎಂದು ಕರೆಉಲಾಗುತ್ತದೆ. ಇವು ನಿಮಿರುವಿಕೆಯ ಸಮಯದಲ್ಲಿ ಶಿಶ್ನ ಗಟ್ಟಿಯಾಗುವಂತೆ ರಕ್ತದಿಂದ ತುಂಬಿರುತ್ತವೆ. ಒಂದು ವೇಳೆ ಅವು ಛಿದ್ರವಾದರೆ ರೋಗಿಗೆ ನಿಮಿರುವಿಕೆ ಸಾಧ್ಯವಾಗುವುದಿಲ್ಲ ಮತ್ತು ಕೃತಕ ಅಂಗದ ಅಗತ್ಯವಿರುತ್ತದೆ ಎಂದು ಜಾರ್ಜ್ ಸ್ಯಾಂಚೆಜ್ ಹೇಳಿಕೆಯನ್ನು ಡೈಲಿ ಮೇಲ್ ವರದಿ ಮಾಡಿದೆ. (ಏಜೆನ್ಸೀಸ್)