ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ನಡೆದ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಸಚಿವರು, ಶಾಸಕರು ಹಾಗೂ ಸಂಸದರು. 
ನ್ಯೂಸ್

ಪರಿಷತ್ ಚುನಾವಣೆಗೆ ರಣತಂತ್ರ: ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚೆ; ಅಭ್ಯರ್ಥಿ ಆಯ್ಕೆ ಅಸ್ಪಷ್ಟತೆ, ತೃಪ್ತಿ ನೀಡದ ಜಿಲ್ಲಾ ವರದಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿ ಎಚ್ಚರಿಕೆ ನಡೆ ಅನುಸರಿಸಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ಘೋಷಿತ 25 ಸ್ಥಾನಗಳ ಜತೆಗೆ ತಲಾ ಎರಡು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಬಗ್ಗೆ ಚರ್ಚೆಯಾಗಿದೆ.

ಮೇಲ್ಮನೆ ಚುನಾವಣೆಗೆ ಆಕಾಂಕ್ಷಿಗಳು ಹಾಗೂ ಸೂಕ್ತ ಅಭ್ಯರ್ಥಿಗಳು ಕುರಿತು ಜಿಲ್ಲಾವಾರು ವರದಿ ಸಲ್ಲಿಕೆಯಾಗಿದ್ದು, ಕೆಲವು ಜಿಲ್ಲೆಗಳ ಬಗ್ಗೆ ವರದಿ ಸಮಿತಿಗೆ ತೃಪ್ತಿ ತಂದಿಲ್ಲ. ಪ್ರತಿ ಕ್ಷೇತ್ರಕ್ಕೆ 2-3 ಆಕಾಂಕ್ಷಿಗಳ ಪಟ್ಟಿ ಸಲ್ಲಿಕೆಯಾಗಿದೆ. ಇದರ ಹೊರತಾಗಿ ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದರೆ, ಹಲವೆಡೆ ಇನ್ನಷ್ಟು ಸಮರ್ಥ ಅಭ್ಯರ್ಥಿಗಳನ್ನು ಹುಡುಕಲು ಸಭೆ ಅಪೇಕ್ಷಿಸಿದೆ ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರವಾರು ಸಮಿತಿ ರಚನೆ: ಅಸ್ಪಷ್ಟತೆ, ಅಸಮರ್ಪಕ ಮಾಹಿತಿ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಮಾಹಿತಿ ಮತ್ತು ಆಯಾ ಜಿಲ್ಲೆಗಳಿಗೆ ಒಮ್ಮತದಿಂದ ಶ್ರಮಿಸುವ ಸಂದೇಶ ನೀಡಲೆಂದು ಪ್ರತಿ ಕ್ಷೇತ್ರಕ್ಕೆ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮಿತಿಯಲ್ಲಿ ಸಂಸದ ಹಾಗೂ ಇಬ್ಬರು ಶಾಸಕರು ಸೇರಿ ನಾಲ್ವರು ಸದಸ್ಯರಿರುತ್ತಾರೆ. ಆಯಾ ಕ್ಷೇತ್ರದ ಮುಖಂಡರು ಮತ್ತು ಇನ್ನುಳಿದ ಶಾಸಕರ ಅಭಿಪ್ರಾಯ ಪಡೆದು ಎರಡು ದಿನಗಳೊಳಗೆ ವರದಿ ಸಲ್ಲಿಸುವ ಜವಾಬ್ದಾರಿ ಸಮಿತಿಗೆ ಒಪ್ಪಿಸಲಾಗಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಸಂಸದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವರಿಷ್ಠರು ಸೂಚನೆ ನೀಡಿದ್ದು, ಹಲವೆಡೆ ಸಂಸದರು ಹಾಗೂ ಶಾಸಕರು ವಿಭಿನ್ನ ಅಭಿಪ್ರಾಯ ನೀಡಿರುವುದು ಸ್ವಲ್ಪಮಟ್ಟಿಗೆ ತೊಡಕಾಗಿದೆ ಎಂದು ಮೂಲಗಳು ತಿಳಿಸಿವೆ.

20 ಕ್ಷೇತ್ರಗಳಿಗೆ ಸ್ಪರ್ಧೆ: ಮೇಲ್ಮನೆಯ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆಯಾದರೂ 20 ಸ್ಥಾನಗಳಲ್ಲಿ ಸ್ಪರ್ಧೆ ಸೂಕ್ತವೆಂಬ ತಾತ್ಪೂರ್ತಿಕ ನಿಲುವು ಸಭೆ ತಳೆದಿದೆ. ಎರಡೂ ಸ್ಥಾನಗಳಿಗೆ ಸ್ಪರ್ಧೆಯಿಂದ ಅನಗತ್ಯ ಗೊಂದಲ, ಅಭ್ಯರ್ಥಿಗಳ ಮಧ್ಯೆ ಹೊಂದಾಣಿಕೆ ಸಮಸ್ಯೆ ಹಾಗೂ ಮತ ಚಲಾವಣೆಯಲ್ಲಿ ವ್ಯತ್ಯಾಸವಾಗಿ ಎರಡೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತಪಡಿಸಿದೆ. ದಕ್ಷಿಣಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ ಮತ್ತು ಮೈಸೂರು ಜಿಲ್ಲೆಗಳು ದ್ವಿಸದಸ್ಯತ್ವ ಹೊಂದಿದ್ದು, ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧೆ ಸೂಕ್ತವೆಂದು ಸಭೆ ಅಭಿಪ್ರಾಯಪಟ್ಟಿದೆ.

ಸೇರ್ಪಡೆ ಚರ್ಚೆ: ಜೆಡಿಎಸ್ ಸದಸ್ಯರಾದ ಸಂದೇಶ ನಾಗರಾಜ್ ಮತ್ತು ಸಿ.ಆರ್.ಮನೋಹರ್ ಸೇರ್ಪಡೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು, ಜಿಲ್ಲಾ ಸಮಿತಿಗಳ ವರದಿ ಪಡೆದ ನಂತರ ಮುಂದಿನ ಹೆಜ್ಜೆಯಿಡಲು ತೀರ್ಮಾನಿಸಿದೆ.

ಸನ್ನದ್ಧ ಸ್ಥಿತಿಯಲ್ಲಿರಲು ಸೂಚನೆ: ಬಿಬಿಎಂಪಿ ಚುನಾವಣೆ ಮುಂದೂಡಬಹುದು ಎಂಬ ಆಲಸ್ಯತನ ಬೇಡ. ಯಾವುದೇ ವೇಳೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಈಗಿನಿಂದಲೇ ತಯಾರಿ ನಡೆಸಿ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಬಿಬಿಎಂಪಿ ವ್ಯಾಪ್ತಿಯ ಸಚಿವರು, ಶಾಸಕರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೂಚಿಸಿದ್ದಾರೆ. ಅನಾರೋಗ್ಯ ಕಾರಣದಿಂದ ಸಚಿವ ವಿ.ಸೋಮಣ್ಣ ಸಭೆಗೆ ಬಂದಿಲ್ಲ. ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಶಾಸಕ ಎಸ್.ರಘು ಗೈರು ಹಾಜರಾಗಿದ್ದರು.

ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ರ್ಚಚಿಸಿದ್ದು, ಜಿಲ್ಲಾ ಸಮಿತಿಗಳ ಜತೆಗೆ ಮತ್ತೊಮ್ಮೆ ಸಂವಹನ ನಡೆಸಿ 2-3 ದಿನಗಳಲ್ಲಿ ಅಂತಿಮ ಪಟ್ಟಿಯನ್ನು ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಲಾಗುವುದು. ಜೆಡಿಎಸ್​ನ ಸಂದೇಶ ನಾಗರಾಜ್, ಸಿ.ಆರ್.ಮನೋಹರ್ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆಯಾಗಿದ್ದು, ಯಾವುದೇ ನಿರ್ಧಾರವಾಗಿಲ್ಲ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಇಂದು ದೆಹಲಿಗೆ ಸಿಎಂ ಬೊಮ್ಮಾಯಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾಸಗಿ ಕಾರ್ಯಕ್ರಮದ ನಿಮಿತ್ತ ನ.10ರಂದು ಬುಧವಾರ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ. ಕೇಂದ್ರದ ಕೆಲ ಸಚಿವರನ್ನು ಭೇಟಿ ಮಾಡಲಿರುವ ಸಿಎಂ, ಅಂದು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದು, ನ.11ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಗ್ರಾಪಂ ಸದಸ್ಯರ ಬೆಂಬಲಕ್ಕೆ ಪ್ಲ್ಯಾನ್

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ನ 25 ಕ್ಷೇತ್ರಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆ ಮಂಗಳವಾರ ಮುಗಿಯುವ ಹಂತದಲ್ಲಿದ್ದಾಗ ವಿಧಾನ ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟವಾಯಿತು. ಗ್ರಾಮ ಪಂಚಾಯಿತಿಗಳಿಗೆ ಶೇ.80 ಬಿಜೆಪಿ ಬೆಂಬಲಿಗರು ಆಯ್ಕೆಯಾಗಿದ್ದಾರೆ. ಇದರ ಲಾಭ ಪಡೆದು ಗರಿಷ್ಠ ಸ್ಥಾನಗಳನ್ನು ಗೆಲ್ಲುವುದಕ್ಕೆ ಕಾರ್ಯತಂತ್ರ ರೂಪಿಸಲು ನಿರ್ಧರಿಸಲಾಗಿದೆ. ಈ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ತೊಡಗಿಸಿ, ಶಕ್ತಿಮೀರಿ ಶ್ರಮಿಸಲು ಸಭೆ ಸೂಚಿಸಿದೆ.

ಜನಪ್ರತಿನಿಧಿಗಳ ಜತೆಗೆ ನಿಕಟ ಸಂಪರ್ಕ, ಸ್ಥಳೀಯ ಸಂಸ್ಥೆಗಳ ಸದೃಢತೆ, ಅಭಿವೃದ್ಧಿ ಕಾರ್ಯಗಳಿಗೆ ನೀಡಿದ ಕೊಡುಗೆಗಳೇ ವಿಧಾನ ಪರಿಷತ್ ಚುನಾವಣೆಯ ಪ್ರಧಾನ ಕಾರ್ಯಸೂಚಿ. ಸಭೆ ನಂತರ ಪಕ್ಷದ ರಾಜ್ಯ ಮುಖ್ಯ ವಕ್ತಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಕೇಂದ್ರ, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ. ಗ್ರಾ.ಪಂ.ಗಳಲ್ಲಿ ಹೆಚ್ಚಿನ ಸಂಖ್ಯೆಯ ಬಿಜೆಪಿ ಬೆಂಬಲಿತ ಸದಸ್ಯರು ಇರುವ ಕಾರಣ ಅಧಿಕ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.

ಯಾತ್ರೆ ವೇಳಾಪಟ್ಟಿ ಬದಲು: ವಿಧಾನ ಪರಿಷತ್ ಚುನಾವಣೆಗೆ ತಯಾರಿ, ಸಂಘಟನಾ ಬಲಪಡಿಸಲು ಉದ್ದೇಶಿತ ಜನ ಸ್ವರಾಜ್ ಯಾತ್ರೆ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿರುವ ಕಾರಣ ಈ ಯಾತ್ರೆಯು ನ.18 ರಿಂದ 21ರವರೆಗೆ ನಡೆಯಲಿದೆ. ಈ ಮೊದಲು ನ.19 ರಿಂದ 23ರವರೆಗೆ ಎಂದು ಗೊತ್ತುಪಡಿಸಲಾಗಿತ್ತು.

ನಾಲ್ಕು ತಂಡಗಳು ನಿಗದಿತ ಜಿಲ್ಲೆಗಳ ಪ್ರವಾಸದಲ್ಲಿ ಯಾವುದೇ ಮಾರ್ಪಾಡಿಲ್ಲ. ಅಲ್ಲದೆ, ಡಿಸೆಂಬರ್ 18 ಮತ್ತು 19ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ, ಪಕ್ಷದ ಸಂಘಟನಾ ಚಟುವಟಿಕೆಗಳ ಕಾರ್ಯ ಯೋಜನೆ ಚರ್ಚೆ, ಸೇವಾ ಹೀ ಸಂಘಟನೆ ಪರಾಮರ್ಶೆಯಾಗಿದೆ. ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದು, ಹಾನಗಲ್ ಕ್ಷೇತ್ರದ ಸೋಲಿನ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

ಪ್ರಚಲಿತ ವಿದ್ಯಮಾನ, ಮುಂದಿನ ಚಟುವಟಿಕೆಗಳ ರೂಪು-ರೇಷೆ ರ್ಚಚಿಸಲಾಗಿದ್ದು, ಲಸಿಕೆ ವಿತರಣೆಯಲ್ಲಿ ದಾಖಲೆ ಮತ್ತು ಗ್ರೀನ್ ಎನರ್ಜಿಗೆ ಮುಂದಾಳತ್ವವಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲಾಗಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್​ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆದಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಒಂಭತ್ತು ಜನ ಕನ್ನಡಿಗರಿಗೆ ಅಭಿನಂದನೆ ಸಲ್ಲಿಸಿದೆ. ಹಾಜಬ್ಬ ಸೇರಿ ಪ್ರಮುಖ ಕೊಡುಗೆ ನೀಡಿದವರನ್ನು ಗುರುತಿಸಿ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಲಾಗಿದೆ.

ನಟ ಪುನೀತ್ ರಾಜಕುಮಾರ್ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ, ಎಂ.ಜಿ.ಮಹೇಶ್, ಮಾಧ್ಯಮ ಸಂಚಾಲಕ ಕರುಣಾಕರ್ ಖಾಸಲೆ ಇದ್ದರು.

ಕಮಲ ಪುಷ್ಪ: ಜನಸಂಘದ ಹುಟ್ಟು ಹಾಗೂ ಬೆಳವಣಿಗೆಯಲ್ಲಿ ದೇಶಾದ್ಯಂತ ತೆರೆಮರೆಯಲ್ಲಿ ಶ್ರಮಿಸಿ, ಕೊಡುಗೆ ನೀಡಿದ ಮಹನೀಯರನ್ನು ನೆನಪು ಹಾಗೂ ಅವರ ಸಾಧನೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸ ಲೆಂದು ‘ಕಮಲ ಪುಷ್ಪ’ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದ್ದು, ಅಂತಹ ಕಾರ್ಯಕರ್ತರ ಮಾಹಿತಿ ಸಂಗ್ರಹಕ್ಕೆ ತಂಡಗಳನ್ನು ರಚಿಸಲಾಗಿದೆ ಎಂದು ಗಣೇಶ್ ಕಾರ್ಣಿಕ್ ಹೇಳಿದರು.