Upendra Dwivedi: ಪಾಕಿಸ್ತಾನವು ವಿಶ್ವ ಇತಿಹಾಸ ಮತ್ತು ಭೌಗೋಳಿಕವಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಬಯಸಿದರೆ, ಅದು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, ಆಪರೇಷನ್ ಸಿಂಧೂರ ಸಮಯದಲ್ಲಿ ಮಾಡಿದಂತೆ ನಾವು ಈ ಬಾರಿ ಯಾವುದೇ ಸಂಯಮವನ್ನು ತೋರಿಸುವುದಿಲ್ಲ, ಮತ್ತೆ ಯಾವುದೇ ರೀತಿಯಲ್ಲಿ ಪ್ರಚೋದನೆ ರೂಪದಲ್ಲಿ ಕೆಣಕಿದರೆ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ ಎನ್ನುವ ಮೂಲಕ ಆಪರೇಷನ್ ಸಿಂಧೂರ ಎರಡನೇ ಆವೃತ್ತಿ ದೂರವಿಲ್ಲ ಎಂದರು.
ಪಾಕ್ ತನ್ನ ಐತಿಹಾಸಿಕ ಮತ್ತು ಭೌಗೋಳಿಕ ಅಸ್ತಿತ್ವವು ಅಪಾಯದಲ್ಲಿದೆ ಎಂದು ಅರಿತುಕೊಂಡು ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು. ಭಾರತದ ಸೈನಿಕರಿಗೆ ಸನ್ನದ್ಧವಾಗಿ ಇರುವಂತೆ ಸೂಚನೆ ನೀಡಿದ ಜನರಲ್ ದ್ವಿವೇದಿ, ಶೀಘ್ರದಲ್ಲೇ ಅವರಿಗೆ ತಮ್ಮ ಫೈರ್‌ಪವರ್ ಪ್ರಯೋಗಿಸುವ ಮತ್ತೊಂದು ಅವಕಾಶ ಸಿಗಬಹುದು ಎಂಬ ಸುಳಿವು ನೀಡಿದರು. ಮೇ 10 ರಂದು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಭಾರತದ ಡಿಜಿಎಂಓಗಳನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ಒತ್ತಾಯಿಸಿದರು, ಇದಕ್ಕೆ ಭಾರತ ಒಪ್ಪಿಕೊಂಡ ನಂತರ ಮೇ ತಿಂಗಳಿನಲ್ಲಿ ನಡೆದ ಯುದ್ಧವು ಸ್ಥಗಿತಗೊಂಡಿತು. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಂಡಿದ್ದರೂ, ಕದನ ವಿರಾಮ ಒಪ್ಪಂದವನ್ನು ತಲುಪುವಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂಬ ತನ್ನ ನಿಲುವಿನಲ್ಲಿ ಭಾರತ ದೃಢವಾಗಿದೆ.
ಸಂಘರ್ಷ ವಿರಾಮದ ಕೆಲ ದಿನಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರ ಇನ್ನೂ ನಡೆಯುತ್ತಿದೆ, ಭವಿಷ್ಯದಲ್ಲಿ ಯಾವುದೇ ಪ್ರಚೋದನೆಗೆ ಇದಕ್ಕಿಂತ ಬಲವಾದ ಉತ್ತರ ನೀಡಲಾಗುವುದು ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜನರಲ್ ದ್ವಿವೇದಿ ಅವರ ಹೇಳಿಕೆ ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದೆ. ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅಮೆರಿಕ ನಿರ್ಮಿತ ಎಫ್ -16 ಮತ್ತು ಚೀನಾದ ಜೆಎಫ್ -17 ಸೇರಿದಂತೆ 8-10 ಪಾಕಿಸ್ತಾನಿ ಯುದ್ಧ ವಿಮಾನಗಳು ನಾಶವಾದವು ಎಂದು ವಾಯುಪಡೆ (ಐಎಎಫ್) ಮುಖ್ಯಸ್ಥ ಎಪಿ ಸಿಂಗ್ ವಿಷಯ ಬಹಿರಂಗಪಡಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಸೇನಾ ಮುಖ್ಯಸ್ಥರು (ಸಿಒಎಎಸ್) ಈ ಅಂತಿಮ ಎಚ್ಚರಿಕೆ ನೀಡಿದ್ದಾರೆ.
93 ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಐಎಎಫ್ ಮುಖ್ಯಸ್ಥರು, ಭಾರತೀಯ ಜೆಟ್‌ಗಳನ್ನು ನಾಶಪಡಿಸಲಾಗಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದರು, ಅವುಗಳನ್ನು ಪಾಕಿಸ್ತಾನದ ಮನೋಹರ್ ಕಹಾನಿಯಾ (ಆಕರ್ಷಕ ಕಥೆಗಳು) ಎಂದು ಕರೆದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಮಾಡಿದ ಭಾಷಣದಲ್ಲಿ ಏಳು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಹೇಳಿದ ಕೆಲವು ದಿನಗಳ ನಂತರ IAF ಮುಖ್ಯಸ್ಥರ ಈ ಹೇಳಿಕೆಗಳು ಬಂದಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಕ್ಕಾಗಿ ಸೇನಾ ಮುಖ್ಯಸ್ಥರು ಮೂವರು ಅಧಿಕಾರಿಗಳನ್ನು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ, ಬಿಎಸ್‌ಎಫ್ 140 ನೇ ಬೆಟಾಲಿಯನ್ ಕಮಾಂಡೆಂಟ್ ಪ್ರಭಾಕರ್ ಸಿಂಗ್, ರಜಪೂತ ರೈಫಲ್ಸ್ ಮೇಜರ್ ರಿತೇಶ್ ಕುಮಾರ್ ಮತ್ತು ಹವಿಲ್ದಾರ್ ಮೋಹಿತ್ ಗೈರಾ ಅವರಿಗೆ ವಿಶೇಷ ಗೌರವ ನೀಡಲಾಯಿತು.(ಏಜೆನ್ಸೀಸ್)