ನ್ಯೂಸ್

Ladakh Protests | ಘರ್ಷಣೆ ವೇಳೆ ಯೋಧ ತ್ಸೆವಾಂಗ್ ಥಾರ್ಚಿನ್ ಸಾವು; ದೇಶಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಇದು ಪ್ರತಿಫಲವೇ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್​ ಗಾಂಧಿ!

Ladakh Protests: ಇತ್ತೀಚೆಗೆ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿರುವ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮೋದಿ ಲಡಾಖ್ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ತಮ್ಮ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​​​ ಹಂಚಿಕೊಂಡಿರುವ ರಾಹುಲ್​, ಮೋದಿಯವರೇ ನೀವು ಲಡಾಖ್ ಜನರಿಗೆ ದ್ರೋಹ ಮಾಡಿದ್ದೀರಿ. ಆ ಜನರು ತಮ್ಮ ಹಕ್ಕುಗಳನ್ನು ಬೇಡುತ್ತಿದ್ದಾರೆ, ಅವರೊಂದಿಗೆ ಸಂವಹನ ನಡೆಸಿ, ಹಿಂಸೆ ಮತ್ತು ಭಯದ ರಾಜಕೀಯವನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ. ತಂದೆ ಮತ್ತು ಮಗ ಸೈನ್ಯದಲ್ಲಿ, ದೇಶಭಕ್ತಿ ಅವರ ರಕ್ತದಲ್ಲಿ ಹರಿಯುತ್ತಿದೆ. ಆದರೂ, ಬಿಜೆಪಿ ಸರ್ಕಾರವು ಈ ಧೈರ್ಯಶಾಲಿ ಮಗನನ್ನು ಗುಂಡಿಕ್ಕಿ ಕೊಂದಿತು, ಏಕೆಂದರೆ ಅವನು ಲಡಾಖ್ ಮತ್ತು ಅವನ ಹಕ್ಕುಗಳಿಗಾಗಿ ನಿಂತಿದ್ದನು ಎಂದು ರಾಹುಲ್​, ಥಾರ್ಚಿನ್ ಅವರ ತಂದೆಯ ವೀಡಿಯೊವನ್ನು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲಡಾಖ್‌ನಲ್ಲಿ ನಡೆದ ಈ ಹತ್ಯೆಗಳ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವ ವಿಪಕ್ಷ ನಾಯಕ, ತಂದೆಯ ನೋವಿನಿಂದ ತುಂಬಿದ ಕಣ್ಣುಗಳು ಪ್ರಶ್ನೆಯನ್ನು ಕೇಳುತ್ತಿವೆ, ಇದು ರಾಷ್ಟ್ರಸೇವೆಗೆ ನೀಡಿದಕ್ಕಾಗಿ ಪ್ರತಿಫಲವೇ? ಎಂದು ಪ್ರಶ್ನಿಸಿದ್ದಾರೆ.

ಲಡಾಖ್‌ನಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಯ ವೇಳೆ ಸಾವನ್ನಪ್ಪಿದವರಲ್ಲಿ ಮಾಜಿ ಸೈನಿಕ ಥಾರ್ಚಿನ್ ಕೂಡ ಸೇರಿದ್ದಾರೆ ಎನ್ನುವುದು ಕಾಂಗ್ರೆಸ್​​ನ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಮವಾರ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, ಥಾರ್ಚಿನ್ ಸಿಯಾಚಿನ್ ಹಿಮನದಿಯಲ್ಲಿ ಸೇವೆ ಸಲ್ಲಿಸಿದರು ಮತ್ತು 1999 ರ ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದರು ಎಂದು ಹೇಳಿದ್ದಾರೆ. ಲಡಾಖ್‌ಗೆ ಆರನೇ ಶೆಡ್ಯೂಲ್ ಸ್ಥಾನಮಾನಕ್ಕಾಗಿ ತ್ಸೆವಾಂಗ್ ಥಾರ್ಚಿನ್ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಐದು ದಿನಗಳ ಹಿಂದೆ ಚಳವಳಿಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಅವರು ಇತರ ಮೂವರೊಂದಿಗೆ ಮೃತರಾಗಿದ್ದು ಅತ್ಯಂತ ದುಃಖ ಮತ್ತು ಆಕ್ರೋಶದ ವಿಷಯವಾಗಿದೆ ಎಂದು ರಮೇಶ್ ಬರೆದುಕೊಂಡಿದ್ದಾರೆ.

ಈ ಹತ್ಯೆಗಳ ಬಳಿಕ ಲಡಾಖ್‌ನಲ್ಲಿ ಕರ್ಫ್ಯೂ ವಿಧಿಸಲಾಯಿತು ಮತ್ತು ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಪ್ರತಿಭಟನಾಕಾರರು ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದರು ಮತ್ತು ಪೊಲೀಸರು ಮತ್ತು ಸಿಆರ್‌ಪಿಎಫ್ ಮೇಲೆ ಕಲ್ಲು ಎಸೆದರು. ಸೆಪ್ಟೆಂಬರ್ 26 ರಂದು, ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಯಿತು ಮತ್ತು ನಂತರ ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿ ಇರಿಸಲಾಯಿತು.

ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಅದರಲ್ಲಿ ಯೋಧ ತ್ಸೆವಾಂಗ್ ಥಾರ್ಚಿನ್ ಕೂಡ ಒಬ್ಬರು.(ಏಜೆನ್ಸೀಸ್​​)