ನ್ಯೂಸ್

ಟ್ರಂಪ್​ ಸುಂಕ ವಿರಾಮ ಎಫೆಕ್ಟ್​: ಲಾಭದೊಂದಿಗೆ ವಹಿವಾಟು ಆರಂಭಿಸಿದ ಭಾರತೀಯ ಷೇರು ಮಾರುಕಟ್ಟೆ! Stock Market

Stock Market : ಮಂಗಳವಾರ (ಏಪ್ರಿಲ್​ 15) ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಹಿಂದಿನ ಅವಧಿಗೆ ಹೋಲಿಸಿದರೆ ಲಾಭದಲ್ಲಿ ವಹಿವಾಟು ಅರಂಭಿಸಿವೆ. ಇಂದು ಬೆಳಗ್ಗೆ 9.23ಕ್ಕೆ ನಿಫ್ಟಿ 472 ಪಾಯಿಂಟ್‌ಗಳ ಏರಿಕೆಯೊಂದಿಗೆ 23,296 ಅಂಕಗಳಿಗೆ ತಲುಪಿದರೆ, ಸೆನ್ಸೆಕ್ಸ್ 1,564 ಪಾಯಿಂಟ್‌ಗಳ ಏರಿಕೆಯೊಂದಿಗೆ 76,727 ಅಂಕಗಳಲ್ಲಿ ವಹಿವಾಟು ಆರಂಭಿಸಿದೆ.

ಅಂದಹಾಗೆ, ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕವು 788.85 ಅಂಕಗಳು ಅಥವಾ ಶೇ. 1.56 ರಷ್ಟು ಏರಿಕೆಯೊಂದಿಗೆ 51,290 ಅಂಕಗಳೊಂದಿಗೆ ವಹಿವಾಟು ಆರಂಭಿಸಿತು. ನಿಫ್ಟಿ 50 ರಲ್ಲಿ ಒಂದೇ ಒಂದು ಷೇರು ಕೂಡ ನಷ್ಟದಲ್ಲಿ ವಹಿವಾಟು ಆರಂಭಿಸಲಿಲ್ಲ.

ಆರಂಭಿಕ ವಹಿವಾಟುವಿನಲ್ಲಿ ಸೆನ್ಸೆಕ್ಸ್ 30ರಲ್ಲಿ ಇಂಡಸ್‌ ಇಂಡ್ ಬ್ಯಾಂಕ್ 5% ಕ್ಕಿಂತ ಹೆಚ್ಚು ಏರಿಕೆ ಕಂಡರೆ, ಟಾಟಾ ಮೋಟಾರ್ಸ್ ಮತ್ತು ಎಲ್ & ಟಿ ಕ್ರಮವಾಗಿ 5% ಮತ್ತು 4.5% ರಷ್ಟು ಏರಿಕೆ ಕಂಡಿವೆ. ಎಂ & ಎಂ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಸುಮಾರು 4% ಮತ್ತು 3.7% ರಷ್ಟು ಆರೋಗ್ಯಕರ ಲಾಭವನ್ನು ಕಂಡಿವೆ. ಮತ್ತೊಂದೆಡೆ, ಐಟಿಸಿ, ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕೆಲವು ವಹಿವಾಟಿನಲ್ಲಿ ಹಿಂದುಳಿದಿವೆ. ಶೇ. 0.15 ರಿಂದ 0.7% ರಷ್ಟು ಕುಸಿತ ಕಂಡಿವೆ.

ಇನ್ನು ಅದೇ ಸಮಯದಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಲಾಭಗಳನ್ನು ಕಾಣುತ್ತಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು 2.06% ರಷ್ಟು ಏರಿಕೆಯಾಗಿ 41,102.97 ಅಂಕಗಳನ್ನು ತಲುಪಿದ್ದರೆ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು 2.56% ರಷ್ಟು ಏರಿಕೆಯಾಗಿ 46,971.33 ಅಂಕಗಳಲ್ಲಿ ನಿಂತಿದೆ.

ಷೇರು ಮಾರುಕಟ್ಟೆ ಏರಿಕೆಗೆ ಕಾರಣವೇನು?

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಪ್ರತೀಕಾರದ ಸುಂಕವನ್ನು ಘೋಷಣೆ ಮಾಡಿದ್ದರು. ಇದು ಮಾರುಕಟ್ಟೆಗಳಲ್ಲಿ ಭಾರಿ ತಲ್ಲಣ ಉಂಟು ಮಾಡಿತ್ತು. ಆದರೆ, ಕೆಲವೇ ದಿನಗಳ ಹಿಂದಷ್ಟೇ ವಿದೇಶಗಳ ಮೇಲೆ ವಿಧಿಸಿದ್ದ ಹೊಸ ಸುಂಕ ನೀತಿಗೆ ಟ್ರಂಪ್​ 90 ದಿನಗಳ ವಿರಾಮ ನೀಡಿದ್ದಾರೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಪಾಸಿಟಿವ್​ ವಹಿವಾಟು ನಡೆಯುತ್ತಿದ್ದು, ಭಾರತೀಯ ಷೇರು ಮಾರುಕಟ್ಟೆಗಳ ಸೂಚ್ಯಂಕವೂ ಕೂಡ ಏರುಗತಿಯಲ್ಲಿವೆ. ಸುಂಕ ಪರಿಹಾರದ ಭರವಸೆಯಿಂದಾಗಿ ಆಟೋ ಷೇರುಗಳು ಲಾಭದಲ್ಲಿ ವಹಿವಾಟು ಆರಂಭಿಸಿವೆ.

ಇನ್ನು ಏಷ್ಯಾದ ಮಾರುಕಟ್ಟೆಗಳು ಕೂಡ ಇದು ಉತ್ತಮ ವಹಿವಾಟು ಆರಂಭಿಸಿವೆ. ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ಪ್ರಮುಖ ಸೂಚ್ಯಂಕವು ಸಹ ಏರಿಕೆಯನ್ನು ಕಂಡಿತು. ಜಾಗತಿಕವಾಗಿ ಅನೇಕ ಮಾರುಕಟ್ಟೆಗಳು ಉತ್ತಮ ಆರಂಭ ಕಂಡಿದ್ದು, ಅದರ ಪ್ರಭಾವ ಭಾರತೀಯ ಮಾರುಕಟ್ಟೆಗಳ ಮೇಲೂ ಪ್ರತಿಬಿಂಬಿಸಿವೆ. ಸೋಮವಾರ ಮೂರು ಪ್ರಮುಖ ಸೂಚ್ಯಂಕಗಳು ಲಾಭದೊಂದಿಗೆ ಮುಕ್ತಾಯಗೊಂಡಿದ್ದರಿಂದ ಯುಎಸ್ ಷೇರು ಮಾರುಕಟ್ಟೆಗಳು ಈ ವಾರ ಉತ್ತಮ ಆರಂಭವನ್ನು ಕಂಡಿದೆ. ಇನ್ನು ಡಾಲರ್​ ಮೌಲ್ಯ ಕ್ಷೀಣಿಸುತ್ತಿರುವುದು ಕೂಡ ಭಾರತೀಯ ಮಾರುಕಟ್ಟೆಗಳಿಗೆ ವರವಾಗಿದೆ,

ಯುಎಸ್ ಡಾಲರ್ ಸೂಚ್ಯಂಕ (ಯುಎಸ್ಡಿ ಸೂಚ್ಯಂಕ) 99.84 ಅಂಕಗಳನ್ನು ತಲುಪಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 64.93 ಯುಎಸ್ ಡಾಲರ್‌ಗಳಲ್ಲಿದೆ. ಯುಎಸ್ 10 ವರ್ಷಗಳ ಬಾಂಡ್ ಇಳುವರಿ ಶೇ. 4.34 ಕ್ಕೆ ತಲುಪಿದೆ. ಕಂಪ್ಯೂಟರ್ ಚಿಪ್‌ಗಳು, ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲಿನ ಸುಂಕವನ್ನು ಟ್ರಂಪ್ ತೆಗೆದುಹಾಕಿದ್ದಾರೆ. ಸುಂಕಗಳ ಅನುಷ್ಠಾನವನ್ನು ತಾತ್ಕಾಲಿಕವಾಗಿ 90 ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಹೀಗಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಕಾರಾತ್ಮಕವಾಗಿ ವಹಿವಾಟು ಆರಂಭಿಸಿವೆ. (ಏಜೆನ್ಸೀಸ್​)