ನ್ಯೂಸ್

ಷೇರು ಮಾರುಕಟ್ಟೆ: ಟ್ರೇಡಿಂಗ್ ಹಾಗೂ ಸೆಟಲ್​ಮೆಂಟ್ ಸೈಕಲ್ ನಿಯಮದಲ್ಲಿ ಬದಲಾವಣೆ...

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಹಾಗೂ ಸೆಟಲ್​ವೆುಂಟ್ ಸೈಕಲ್ ನಿಯಮದಲ್ಲಿ ಬದಲಾವಣೆ ತರಲು ನಿರ್ಧಾರ ಮಾಡಲಾಗಿದೆ. ಪ್ರಸ್ತುತ ಇರುವ ಟಿ+2 ವ್ಯವಸ್ಥೆ ಇನ್ನು ಮುಂದೆ ಟಿ+1 ಆಗಿ ಬದಲಾವಣೆ ಆಗಲಿದೆ. ಮುಂದಿನ ವರ್ಷ ಫೆ. 25 ರಿಂದ ಈ ನಿಯಮ ಜಾರಿಗೆ ಬರಲಿದೆ.

ಪ್ರಸ್ತುತ ಸ್ಟಾಕ್ ಎಕ್ಸ್ ಚೇಂಜ್ ಮೂಲಕ ಷೇರುಗಳನ್ನು ಖರೀದಿ ಮಾಡಿದರೆ ಎರಡು ದಿನಗಳ ಬಳಿಕ ಅದು ಹೂಡಿಕೆದಾರರ ಡಿಮ್ಯಾಟ್ ಖಾತೆಗೆ ಜಮಾ ಆಗುತ್ತದೆ. ಅದೇ ರೀತಿ ಷೇರುಗಳನ್ನು ಮಾರಾಟ ಮಾಡಿದರೆ ಎರಡು ದಿನಗಳ ಬಳಿಕ ಡಿಮ್ಯಾಟ್ ಖಾತೆಯಿಂದ ಷೇರುಗಳು ಹೊರ ಹೋಗುತ್ತವೆ. ಇದನ್ನು ಟಿ+2 ಸೆಟಲ್​ವೆುಂಟ್ ಸೈಕಲ್ ಎಂದು ಕರೆಯಲಾಗುತ್ತದೆ. ಹೊಸ ನಿಯಮ ಜಾರಿಗೆ ಬಂದ ನಂತರ ಮರು ದಿನವೇ ಹೂಡಿಕೆದಾರರ ಖಾತೆಗೆ ಷೇರುಗಳು ಜಮಾ ಆಗಲಿವೆ. ಸೆಟಲ್​ವೆುಂಟ್​ಗಳು ತ್ವರಿತವಾಗಿ ನಡೆಯುವುದರಿಂದ ಹೂಡಿಕೆದಾರರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಿ+2 ವ್ಯವಸ್ಥೆ ಟಿ+1 ಆಗಿ ಬದಲಾವಣೆ

ವಿವಿಧ ಹಂತಗಳಲ್ಲಿ ಜಾರಿಗೆ: ಹೊಸ ನಿಯಮವನ್ನು ವಿವಿಧ ಹಂತಗಳಲ್ಲಿ ಜಾರಿಗೆ ತರಲಾಗುತ್ತದೆ. ಮೊದಲು ಕಡಿಮೆ ಮಾರುಕಟ್ಟೆ ಬಂಡವಾಳ ಹೊಂದಿ ರುವ ಕಂಪನಿಯ ಷೇರುಗಳಿಗೆ ಈ ನಿಯಮ ಅನ್ವಯಿಸಲಾಗುತ್ತದೆ. ನಂತರ ದೊಡ್ಡ ಕಂಪನಿಗಳ ಷೇರುಗಳಲ್ಲಿ ಈ ನಿಯಮ ಜಾರಿಗೆ ತರಲಾಗುತ್ತದೆ. 19 ವರ್ಷ ಬಳಿಕ ಷೇರು ಮಾರುಕಟ್ಟೆಯ ನಿಯಮಕ್ಕೆ ಬದಲಾವಣೆ ತರಲಾಗುತ್ತಿದೆ. ಈ ಮೊದಲು ಟಿ+3 ನಿಯಮ ಜಾರಿಯಲ್ಲಿತ್ತು.

19 ವರ್ಷದ ಹಿಂದೆ ಇದನ್ನು ಟಿ+2ಗೆ ಇಳಿಕೆ ಮಾಡಲಾಯಿತು. ಈಗ ಟಿ+1ಗೆ ಇಳಿಕೆ ಮಾಡಲಾಗುತ್ತದೆ. ಮ್ಯುಚುವಲ್ ಫಂಡ್, ಡೆಟ್ ಸೆಕ್ಯುರಿಟಿಗಳು, ಕಾಪೋರೇಟ್ ಬಾಂಡ್, ಸಾವರಿನ್ ಬಾಂಡ್, ಸರ್ಕಾರಿ ಬಾಂಡ್, ಟ್ರೆಜರಿ ಬಿಲ್, ಇಟಿಎಫ್ ಇನ್ನಿತರ ಸೆಕ್ಯುರಿಟಿಗಳನ್ನು 2023 ಜನವರಿಯಲ್ಲಿ ಹೊಸ ನಿಮಯ ವ್ಯಾಪ್ತಿಗೆ ತರಲಾಗುತ್ತದೆ.