ನ್ಯೂಸ್

ಸುನಿತಾ ವಿಲಿಯಮ್ಸ್​ಗೆ ಕಹಿ ಸುದ್ದಿ: ಭೂಮಿಗೆ ಮರಳುವುದು ಮತ್ತಷ್ಟು ವಿಳಂಬ, ಕಾರಣ ಹೀಗಿದೆ… Sunita Williams

Sunita Williams : ಬಹಳ ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್, ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಂದು ಹೊರಡಬೇಕಿದ್ದ ಸ್ಪೇಸ್‌ಎಕ್ಸ್ ಕ್ರೂ 10 ಉಡಾವಣೆಯನ್ನು ಮುಂದೂಡಲಾಗಿರುವುದರಿಂದ ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡದ ಮರಳುವಿಕೆ ಇನ್ನಷ್ಟು ವಿಳಂಬವಾಗಲಿದೆ.

ಭಾರತೀಯ ಕಾಲಮಾನ ಇಂದು ಬೆಳಗ್ಗೆ 5.18ಕ್ಕೆ ಉಡಾವಣೆ ನಿಗದಿಯಾಗಿತ್ತು. ನಾಲ್ವರು ಗಗನಯಾತ್ರಿಗಳು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ಹೋಗಬೇಕಿತ್ತು. ಇದನ್ನು ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗುತ್ತದೆ. ಆದರೆ, ಕೊನೆಯ ಕ್ಷಣದಲ್ಲಿ ಲಾಂಚ್ ಪ್ಯಾಡ್‌ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಯಿತು.

ಮುಂದಿನ ಉಡಾವಣಾ ಪ್ರಯತ್ನ ಯಾವಾಗ ನಡೆಯಲಿದೆ ಎಂಬುದನ್ನು ಸ್ಪೇಸ್‌ಎಕ್ಸ್ ಮತ್ತು ನಾಸಾ ಇನ್ನೂ ದೃಢಪಡಿಸಿಲ್ಲ. ಹೀಗಾಗಿ ಸುನಿತಾ ವಿಲಿಯಮ್ಸ್​ ಭೂಮಿಗೆ ಮರಳುವುದು ಮತ್ತಷ್ಟು ತಡವಾಗಲಿದೆ.

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಈ ವರ್ಷ ಜೂನ್ 6ರಂದು ಬೋಯಿಂಗ್ ಸ್ಟಾರ್​ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. ಕೆಲಸ ಮುಗಿಸಿ ಒಂದೇ ವಾರದಲ್ಲಿ ಭೂಮಿಗೆ ಮರಳಬೇಕಿತ್ತು. ಆದಾಗ್ಯೂ, ಸ್ಟಾರ್‌ಲೈನರ್‌ನ ಪ್ರೊಪಲ್ಷನ್ ಸಿಸ್ಟಮ್‌ನ ಸಮಸ್ಯೆಯಿಂದಾಗಿ ಎಂಟು ದಿನಗಳ ಪ್ರವಾಸವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್​ಲೈನರ್ ಭೂಮಿಗೆ ಮರಳಿತು.

ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ನಾಸಾದ ಪ್ರಯತ್ನಗಳು ಈವರೆಗೂ ವಿಫಲವಾಗಿವೆ. ಈ ಮಧ್ಯೆ, ಸುನೀತಾ ವಿಲಿಯಮ್ಸ್​, ಮಹಿಳೆಯೊಬ್ಬರು ಮಾಡಿದ ಅತಿ ಉದ್ದದ ಬಾಹ್ಯಾಕಾಶ ನಡಿಗೆಯ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

ಸಾಮಾನ್ಯವಾಗಿ ಒಬ್ಬ ಗಗನಯಾತ್ರಿ ಅಂತರಿಕ್ಷದಲ್ಲಿದ್ದಾಗ ಅಲ್ಲಿ ಎಷ್ಟು ದಿನ ಬದುಕಬಹುದು ಎಂಬ ಪ್ರಶ್ನೆ ಮೂಡುತ್ತದೆ. ಗಗನಯಾತ್ರಿಗಳು ಯಾವುದೋ ಕಾರಣಕ್ಕಾಗಿ ಬಾಹ್ಯಾಕಾಶದಲ್ಲೇ ಸಿಲುಕಿಕೊಂಡರೆ, ಅವರು ಸುಲಭವಾಗಿ 300 ರಿಂದ 400 ದಿನಗಳವರೆಗೆ ಅಂದರೆ, ಒಂದು ವರ್ಷ ಆರಾಮಾಗಿ ಅಲ್ಲಿಯೇ ಉಳಿಯಬಹುದು. ಈ ಪ್ರಕಾರ ಸುನಿತಾ ವಿಲಿಯಮ್ಸ್ ಇನ್ನು ಕೆಲವು ತಿಂಗಳು ಸುರಕ್ಷಿತವಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಬಹುದು. ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದ ದಾಖಲೆ ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್ ಅವರ ಹೆಸರಿನಲ್ಲಿದೆ. ಅವರು 1994ರ ಜನವರಿಯಿಂದ 1995ರ ಮಾರ್ಚ್​ವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 437 ದಿನಗಳನ್ನು ಕಳೆದರು.

ಹೆಚ್ಚು ದಿನ ಬಾಹ್ಯಾಕಾಶದಲ್ಲೇ ಉಳಿದರೆ ಏನಾಗುತ್ತದೆ?

ಬಾಹ್ಯಾಕಾಶದ ವಾತಾವರಣವೇ ತುಂಬಾ ವಿಭಿನ್ನ. ಈ ವಾತಾವರಣದಲ್ಲಿ ಒತ್ತಡದ ಅನುಪಸ್ಥಿತಿ ಇರುತ್ತದೆ ಮತ್ತು ವಿಪರೀತ ನಿರ್ವಾತ ಪರಿಸ್ಥಿತಿ ಇರುತ್ತದೆ. ಹೀಗಾಗಿ ಎಚ್ಚರಿಕೆಯ ನಡೆ ಅತ್ಯಗತ್ಯ. ಗಗನಯಾತ್ರಿಗಳ ಉಳಿವಿಗಾಗಿ ಅಗತ್ಯವಾದ ಆಮ್ಲಜನಕ ಮಟ್ಟ ಸೇರಿದಂತೆ ನಿಯಂತ್ರಿತ ವಾತಾವರಣವನ್ನು ಒದಗಿಸಲು ಬಾಹ್ಯಾಕಾಶ ನೌಕೆಯಂತಹ ವ್ಯವಸ್ಥೆಗಳನ್ನು ಅಂಬಿಸಿರುತ್ತಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ಸಣ್ಣ ವೈಫಲ್ಯ ಕಾಣಿಸಿಕೊಂಡರು ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಅಲ್ಲದೆ, ಸಾವು ಸಂಭವಿಸುವ ಸಾಧ್ಯತೆಯೂ ಇದೆ.

ಬಾಹ್ಯಾಕಾಶದಲ್ಲಿರುವ ವಿಶಿಷ್ಟ ಪರಿಸರವು ದೇಹದಲ್ಲಿ ದ್ರವದ ಬದಲಾವಣೆಗಳಿಗೆ ಕಾರಣವಾಗುತ್ತದೆ. ದೇಹದೊಳಗಿನ ದ್ರವಗಳು ಮೇಲಿನ ದೇಹದ ಮೇಲ್ಭಾಗಕ್ಕೆ ಮರುಹಂಚಿಕೆಯಾಗುತ್ತವೆ. ಇದರಿಂದ ಇಂಟ್ರಾಕ್ರೇನಿಯಲ್ ಒತ್ತಡ ಹೆಚ್ಚಾಗಬಹುದು. ಹೀಗಾದಲ್ಲಿ ತಲೆನೋವು, ದೃಷ್ಟಿಹೀನತೆ ಮತ್ತು ಮೆದುಳು ಹಾನಿಯಾಗಬಹುದು. ಅಲ್ಲದೆ, ಬಾಹ್ಯಾಕಾಶದಲ್ಲಿ ಕಾಸ್ಮಿಕ್ ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಡಿಎನ್​ಎಗೂ ಹಾನಿಯಾಗಬಹುದು. ಇದರಿಂದ ಕ್ಯಾನ್ಸರ್​ ಸೇರಿದಂತೆ ಇತರೆ ನರವೈಜ್ಞಾನಿಕ ಪರಿಸ್ಥಿತಿಗಳು ಸಹ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸದ್ಯ ನಾಸಾ ಬಾಹ್ಯಾಕಾಶ ನೌಕೆಯಲ್ಲಿನ ರೇಡಿಯೇಷನ್​ ಮಟ್ಟವನ್ನು ಮಾನಿಟರ್​ ಮಾಡುತ್ತಿದೆ. ಆದರೆ, ಸುನಿತಾ ವಿಲಿಯಮ್ಸ್​ ಆಗಮನ ವಿಳಂಬವಾದಷ್ಟು ಮೆದುಳಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಮೆದುಳು ಕಾರ್ಯಕ್ಕೆ ಆಮ್ಲಜನಕ ತುಂಬಾನೇ ಮುಖ್ಯ. ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಮೆದುಳು ಹೆಚ್ಚು ಸಂವೇದನಾಶೀಲವಾಗಿರುತ್ತದೆ ಮತ್ತು ಅಲ್ಪಾವಧಿಯ ಕೊರತೆಯು ಸಹ ಆಳವಾದ ಪರಿಣಾಮಗಳನ್ನು ಬೀರುತ್ತದೆ. ಕೆಲವೇ ನಿಮಿಷಗಳ ಆಮ್ಲಜನಕ ಕೊರತೆಯು ಮೆದುಳು ಕೋಶಗಳ ಸಾವಿಗೆ ಕಾರಣವಾಗಬಹುದು. ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ, ಗಗನಯಾತ್ರಿಗಳಿಗೆ ಲೈಫ್​ ಸಪೋರ್ಟಿಂಗ್​ ಸಿಸ್ಟಮ್​ ಮೂಲಕ ಆಮ್ಲಜನಕವನ್ನು ನಿರಂತರವಾಗಿ ಪೂರೈಸಲಾಗುತ್ತದೆ. ಆದಾಗ್ಯೂ, ಈ ವ್ಯವಸ್ಥೆಯು ವಿಫಲವಾದಲ್ಲಿ ಅಥವಾ ಆಮ್ಲಜನಕದ ಕೊರತೆಗೆ ಕಾರಣವಾಗುವ ತುರ್ತುಸ್ಥಿತಿ ಎದುರಾದರೆ, ಅದರಿಂದಾಗುವ ಅಪಾಯಗಳು ಮಾತ್ರ ಗಮನಾರ್ಹವಾಗಿವೆ. (ಏಜೆನ್ಸೀಸ್​)