ನ್ಯೂಸ್

ವಿಕಾಸ್​​ ದುಬೆ ಸಹಚರ ಜೈ ಬಾಜ್ಪೇಯಿ ಆಸ್ತಿ ಮೇಲೆ ಪೊಲೀಸರ ಹದ್ದಿನ ಕಣ್ಣು... ಆಸ್ತಿ ವಿವರ ಕೇಳಿದ ಎಸ್​​ಟಿಎಫ್

ಕಾನ್ಪುರ: ದರೋಡೆಕೋರ ವಿಕಾಸ್ ದುಬೆ ಎನ್​ಕೌಂಟರ್​ ನಂತರ, ಉತ್ತರ ಪ್ರದೇಶ ಪೊಲೀಸರು ಈಗ ಆತನ ಸಹಾಯಕ ಮತ್ತು ಹಣಕಾಸು ಸಹಾಯ ಮಾಡಿದ ಜೈ ಬಾಜ್ಪೈ ಗಳಿಸಿದ ಸಂಪತ್ತಿನತ್ತ ಕಣ್ಣಿಟ್ಟಿದ್ದಾರೆ.

ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜೈ ವಾಜ್ಪೇಯಿ ಹಾಗೂ ಆತನ ಇತರ 10 ಸಹಚರರ ಆಸ್ತಿ ವಿವರ ಕೇಳಿದೆ.

ಏತನ್ಮಧ್ಯೆ, ಬಾಜ್ಪೇಯಿ ಹೆಂಡತಿ ಶ್ವೇತಾ, ಸಾಕಷ್ಟು ಪುರಾವೆಗಳಿಲ್ಲದೆ ಪೊಲೀಸರು ತನ್ನ ಗಂಡನನ್ನು ಅನಗತ್ಯವಾಗಿ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಗಂಡ ಯಾವುದೇ ತಪ್ಪು ಮಾಡಿಲ್ಲ ಮತ್ತು ಅವರ ಕುಟುಂಬವನ್ನು ಅನಗತ್ಯವಾಗಿ ಸಮಸ್ಯೆಗೆ ಎಳೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾನ್ಪುರದಲ್ಲಿ ಎನ್​ಕೌಂಟರ್​​ ನಡೆದಾಗ ಪೊಲೀಸರು ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ ಮತ್ತು ಆ ಸಂದರ್ಭದಲ್ಲಿ ತಮ್ಮ ಪತಿ ಮನೆಯಲ್ಲಿದ್ದರು ಎಂದು ಶ್ವೇತಾ ಆರೋಪಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಬಾಜ್​​​ಪೇಯಿ ಆಸ್ತಿ ಮತ್ತು ಅವುಗಳ ಅಂದಾಜು ಮೌಲ್ಯಗಳ ವಿವರ ಕೋರಿ ಎಸ್‌ಟಿಎಫ್ ಕಾನ್ಪುರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ. ಆಸ್ತಿಗಳ ವಿವರಗಳನ್ನು ನೀಡಲು ಆಡಳಿತವು ನೋಂದಣಿ ವಿಭಾಗವನ್ನು ಕೇಳಿದೆ.

ಬಳಸಿದ ಸ್ಟಾಂಪ್ ಪೇಪರ್‌ಗಳು ಆಸ್ತಿಗಳ ಮೌಲ್ಯಕ್ಕೆ ಸಮನಾಗಿವೆಯೇ ಮತ್ತು ಅದರಲ್ಲಿ ಯಾವುದಾದರೂ ತಪ್ಪುಗಳಿವೆಯೇ ಎಂದು ಕಂಡುಹಿಡಿಯಲು ನೋಂದಣಿ ವಿಭಾಗಕ್ಕೆ ತಿಳಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಬೆನಾಮಿ ವಿಭಾಗವೂ ಜೈ ಬಾಜ್‌ಪೈ ಆಸ್ತಿಗಳ ಬಗ್ಗೆ ತನಿಖೆ ಆರಂಭಿಸಿದೆ.

ಬೆನಾಮಿ ವಿಭಾಗವು ಘೋಷಿತ ಮತ್ತು ಅಘೋಷಿತ ಆಸ್ತಿ ಬಗ್ಗೆ ತನಿಖೆ ನಡೆಸಲಿದೆ. ಈಗಿನಂತೆ, ಆರ್ಯನಗರ, ಪಂಕಿ ಮತ್ತು ಸ್ವರೂಪ್ ನಗರ ಸೇರಿದಂತೆ ಬಾಜ್ಪೇಯಿಯ ಏಳು ಆಸ್ತಿಗಳ ಬಗ್ಗೆ ಇಲಾಖೆ ಗಮನ ಹರಿಸುತ್ತಿದೆ.

ಪೊಲೀಸರು ಇದುವರೆಗೆ ಬಾಜ್ಪೇಯಿಗೆ ಸೇರಿದ ಬೃಹತ್ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಈ ಆಸ್ತಿಗಳ ನಿಜವಾದ ಮಾಲೀಕ-ಜೈ ಬಾಜ್ಪೈ ಅಥವಾ ವಿಕಾಸ್ ದುಬೆ ಇವರಿಬ್ಬರ ಪೈಕಿ ಯಾರು ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ವಿಶೇಷವೆಂದರೆ, ಜೈ ಬಾಜ್ಪೇಯ್ ಮುದ್ರಣಾಲಯದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದ, ಕೆಲವೇ ಸಾವಿರ ರೂ. ಸಂಬಳ ಪಡೆಯುತ್ತಿದ್ದ. ಜುಲೈ 20 ರಂದು ಆತನನ್ನು ಪೊಲೀಸರು ಬಂಧಿಸಿದ್ದರು.