ಮದುವೆಯಾಗಿ ವರ್ಷಗಳೇ ಕಳೆದ್ರೂ ಸೆಕ್ಸ್​ಗೆ ಒಪ್ಪದ ಪತ್ನಿ ಬೇಸತ್ತ ಪತಿ ಆತ್ಮಹತ್ಯೆಗೆ ಶರಣು

31824854-8616119-image-a-36_1597157829852
Published on

ಅಹಮದಾಬಾದ್​: ಮೊದಲ ಪತ್ನಿಯಿಂದ ಅಧಿಕೃತವಾಗಿ ವಿಚ್ಛೇದನ ಪಡೆದು, ಸಾಂಪ್ರದಾಯಿಕವಾಗಿ ಎರಡು ಬಾರಿ ವಿಚ್ಛೇದನ ಪಡೆದುಕೊಂಡಾಕೆಯನ್ನು ಮದುವೆಯಾಗಿದ್ದ. ಆದರೆ, ಗಂಡನ ಜತೆ ಮಲಗಿ ಲೈಂಗಿಕ ಸುಖ ನೀಡಲು ಆಕೆ ಸಹಕರಿಸದೇ ಹೋಗಿದ್ದರಿಂದ ಬೇಸತ್ತ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸರಸ್​ಪುರ ನಿವಾಸಿ ಸುಂದರ್​ ಸಿನ್ಹಾ (32) ಆತ್ಮಹತ್ಯೆ ಮಾಡಿಕೊಂಡವನು. ಈತ ಜು.27ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಈತನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಈತನ ಎರಡನೇ ಪತ್ನಿ ಗೀತಾ ಸಿನ್ಹಾ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸುಂದರ್​ ಸಿನ್ಹಾ ರೈಲ್ವೆ ಉದ್ಯೋಗಿಯಾಗಿದ್ದ. ಮೊದಲೇ ಮದುವೆಯಾಗಿದ್ದ ಆತ 2016ರಲ್ಲಿ ಆಕೆಯಿಂದ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ. 2018ರ ಅಕ್ಟೋಬರ್​ನಲ್ಲಿ ಆತ ಗೀತಾಳನ್ನು ಮದುವೆಯಾಗಿದ್ದ. ಗೀತಾಳಿಗೆ ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದು, ಎರಡು ಬಾರಿಯೂ ಸಾಂಪ್ರದಾಯಿಕ ರೀತಿಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದಳು ಎನ್ನಲಾಗಿದೆ.

ಮದುವೆಯಾದ ದಿನದಿಂದಲೂ ಆಕೆ ತನ್ನನ್ನು ಮುಟ್ಟಲು ಪತಿಗೆ ಅವಕಾಶ ನೀಡಿರಲಿಲ್ಲ. ಅಲ್ಲದೆ, ಮಲಗುವ ಕೋಣೆಯಲ್ಲಿ ಕೂಡ ಪ್ರತ್ಯೇಕ ಮಂಚಗಳ ಮೇಲೆ ಮಲಗುತ್ತಿದ್ದರು. ತನಗೆ ಅಧಿಕೃತವಾಗಿ ತಾಳಿ ಕಟ್ಟಿ ಗಂಡ ಎನಿಸಿಕೊಂಡವನ ಜತೆ ಮೈಹಂಚಿಕೊಳ್ಳದಿರಲು ಹರಕೆ ಕಟ್ಟಿಕೊಂಡಿರುವುದಾಗಿ ಹೇಳಿ, ಆತನನ್ನು ದೂರವೇ ಇರಿಸಿದ್ದಳು.

ಅದೊಂದು ದಿನ ಆಕಸ್ಮಿಕವಾಗಿ ಸುಂದರ್ನ ತಾಯಿ ಮೂಲಿ ಪರ್ಮಾರ್​ಗೆ ಈ ವಿಷಯ ತಿಳಿದಿತ್ತು. ಆಕೆ ಪ್ರಶ್ನಿಸಿದಾಗ, ತನ್ನೊಂದಿಗೆ ಮಲಗಲು ಆಕೆ ನಿರಾಕರಿಸುತ್ತಿರುವುದಾಗಿ ಹೇಳಿದ್ದ. ಸಮಯ ಸಂದಂತೆ ದಂಪತಿ ನಡುವೆ ಸಣ್ಣಪುಟ್ಟ ಜಗಳಗಳು ಆರಂಭವಾಗಿದ್ದವು. ಇದರಿಂದ ಬೇಸತ್ತ ಗೀತಾ ಗಂಡನ ಮನೆ ತೊರೆದು ತವರು ಮನೆ ಸೇರಿದ್ದಳು. ಆನಂತರದಲ್ಲಿ ಸುಂದರ್​ ಪತ್ನಿಯ ಮೊಬೈಲ್​ ನಂಬರ್​ ಅನ್ನು ಕೂಡ ಬ್ಲಾಕ್​ ಮಾಡಿಕೊಂಡಿದ್ದ ಎನ್ನಲಾಗಿದೆ. ಆಕೆ ತನ್ನನ್ನು ತೊರೆದು ಹೋದಾಗಿನಿಂದ ಆತ ಮಂಕಾಗಿ ಇರುತ್ತಿದ್ದ ಎನ್ನಲಾಗಿದೆ.

ಜು.27ರಂದು ಸಂಬಂಧಿಯೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆಂದು ಮೂಲಿ ಪರ್ಮಾರ್​ ಮತ್ತು ಅವರ ಕುಟುಂಬ ಸದಸ್ಯರು ತೆರಳಿದ್ದರು. ಮನೆಯಲ್ಲಿ ಒಬ್ಬನೇ ಇದ್ದ ಸುಂದರ್​ ಸಿನ್ಹಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಂದರ್​ ತಾಯಿ ಆ.6ರಂದು ಗೀತಾ ವಿರುದ್ಧ ದೂರು ದಾಖಲಿಸಿದ್ದು, ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net