ನ್ಯೂಸ್

ಪತ್ನಿಯ ಶೀಲದ ಮೇಲೆ ಶಂಕೆ, ಮಲಪುತ್ರನ ಮೇಲೆ ಸಿಟ್ಟು, ಗುದದ್ವಾರದಲ್ಲಿ ಕಸಬರಿಕೆ ನುಗ್ಗಿಸಿ ಕೊಂದೇ ಬಿಟ್ಟ ಕಿರಾತಕ

ರತ್ಲಾಂ: ಒಂದೆಡೆ ಪತ್ನಿಯ ಶೀಲದ ಮೇಲೆ ಶಂಕೆ. ಇನ್ನೊಂದೆಡೆ ರಾತ್ರಿ ವೇಳೆ ಹಾಸಿಗೆಯಲ್ಲೇ ಮೂತ್ರ ವಿಸರ್ಜಿಸುತ್ತಾನೆ ಎಂಬ ಕೋಪ. ಜತೆಗೆ ಮದ್ಯದ ಅಮಲು. ಇವೆಲ್ಲವೂ ಸೇರಿಕೊಂಡು ಮನೆಗೆ ಬಂದ ಆತ 5 ವರ್ಷದ ಮಲಪುತ್ರನನ್ನು ಕೋಣೆಗೆ ಕರೆದೊಯ್ದು, ಗುದದ್ವಾರದಲ್ಲಿ ಕಸಬರಿಕೆಯನ್ನು ನುಗ್ಗಿಸಿದ. ಜತೆಗೆ ಮನಸೋಇಚ್ಛೆ ಥಳಿಸಿ ಆತನನ್ನು ಸಾಯಿಸಿ ಪರಾರಿಯಾಗಿದ್ದಾನೆ.

ಮಧ್ಯಪ್ರದೇಶದ ಮಂಡಸೌರ್​ನ ನಿವಾಸಿ ಜಾಫರ್​ ಮಲಪುತ್ರನನ್ನು ಕೊಲೆ ಮಾಡಿದವನು. ಪುತ್ರನನ್ನು ಬಿಡಿಸಿಕೊಳ್ಳಲು ಈತನ ಪತ್ನಿ ನಜ್ಮಾ ಪ್ರಯತ್ನಿಸಿದಾಗ ಆಕೆಯ ಮೇಲೆ ಜಾಫರ್​ ಚೂರಿಯಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ 9.30ಕ್ಕೆ ಜಾಫರ್​ ಪಾನಮತ್ತನಾಗಿ ನಯಾಪುರ್​ ಕಾರ್ಮಿಕರ ಕಾಲನಿಯಲ್ಲಿರುವ ತನ್ನ ಮನೆಗೆ ಮರಳಿದ್ದ. ಈ ಸಂದರ್ಭದಲ್ಲಿ ಆತನ ತಾಯಿ ಜೊಹಾರಾ ಬೀ, ಅಣ್ಣ ಇಕ್ಬಾಲ್​, ಸಹೋದರಿಯರಾದ ಸನ್ನೋ ಮತ್ತು ಅಂಶು ಮನೆಯಲ್ಲಿದ್ದರು.

ಜಾಫರ್​ಗೆ ಊಟ ನಜ್ಮಾ ಊಟ ಬಡಿಸಿದಾಗ ಆತ ಕೋಪದಲ್ಲಿ ತಟ್ಟೆಯನ್ನು ಬಿಸಾಡಿ ತನ್ನ ಕೋಣೆಗೆ ಹೋಗಿದ್ದಾನೆ. ಎರಡು ದಿನಗಳ ಹಿಂದೆ ಹಾಸಿಗೆಯಲ್ಲೇ ಮೂತ್ರ ವಿಸರ್ಜಿಸಿದ್ದ ಸಿಟ್ಟಿನಲ್ಲಿದ್ದ ಆತ ಪುತ್ರನನ್ನು ಕೋಣೆಯೊಳಗೆ ಎಳೆದುಕೊಂಡು ಹೋಗಿ ಹೊಡೆಯಲು ಆರಂಭಿಸಿದ್ದಾನೆ. ಇದನ್ನು ಕಂಡ ಜೊಹರಾ ಬೀ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಡಲು ತೆರಳಿದ್ದಳು ಎನ್ನಲಾಗಿದೆ.

ಜೊಹಾರಾ ಬೀ ಕೊಟ್ಟ ಮೌಖಿಕ ದೂರು ಆಧರಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗುವಷ್ಟರಲ್ಲಿ ಜಾಫರ್​ ಮಲಪುತ್ರನ ಗುದದ್ವಾರದಲ್ಲಿ ಕಸಬರಿಕೆಯನ್ನು ತೂರಿಸಿ, ಮನಸೋಇಚ್ಛೆ ಥಳಿಸಿದ್ದ. 5 ವರ್ಷದ ಬಾಲಕ ಅಳುವುದನ್ನು ನಿಲ್ಲಿಸುತ್ತಿದ್ದಂತೆ ಆತನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.

ಪುತ್ರನನ್ನು ಎಬ್ಬಿಸಲು ನಜ್ಮಾ ಸಾಕಷ್ಟು ಪ್ರಯತ್ನಿಸಿದ್ದಳು. ಬಳಿಕ ಆಸ್ಪತ್ರೆಗೆ ಕರೆದೊಯ್ದಾಗ ಬಾಲಕ ಅದಾಗಲೇ ಸತ್ತಿರುವುದಾಗಿ ವೈದ್ಯರು ತಿಳಿಸಿದರು ಎನ್ನಲಾಗಿದೆ.