ಬೆಂಗಳೂರು: ಹಠಾತ್ ಹೃದಯಘಾತದಿಂದ ಸಂಭವಿಸುತ್ತಿರುವ ಸಾವು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ‘ಸ್ಟೆಮಿ’ ಹೃದಯಾಘಾತ ನಿರ್ವಹಣಾ ಕಾರ್ಯಕ್ರಮ ಜಾರಿಗೊಳಿಸಿದೆ.
ವಿಶ್ವ ಹೃದಯ ದಿನದ ಅಂಗವಾಗಿ ವಿಜಯವಾಣಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ‘ಫೋನ್ಇನ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಈ ವಿಷಯ ತಿಳಿಸಿದರು. ರಾಜ್ಯದ ಹತ್ತು ಜಿಲ್ಲಾಸ್ಪತ್ರೆ ಹಾಗೂ 35 ತಾಲೂಕು ಆಸ್ಪತ್ರೆಗಳು ಸೇರಿ 45 ಆರೋಗ್ಯ ಕೇಂದ್ರಗಳಲ್ಲಿ ಸ್ಟೆಮಿ ಆರೋಗ್ಯ ಸೇವೆ ಜಾರಿಗೊಳಿಸಲಾಗಿದೆ. ಇವುಗಳಿಗೆ ಜಯದೇವ ಸಂಸ್ಥೆಯು ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಘಟಕಗಳನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು ಸೇವೆ ಒದಗಿಸಲಾಗುತ್ತಿದೆ. ಪ್ರತಿ ಘಟಕಕ್ಕೆ 15 ಆರೋಗ್ಯ ಕೇಂದ್ರಗಳ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಈ ಕೇಂದ್ರಗಳಿಗೆ ಖಾಸಗಿ ಏಜೆನ್ಸಿ ಮೂಲಕ ಹೃದಯಾಘಾತ ನಿರ್ವಹಣಾ ಕಿಟ್ಗಳನ್ನು ಪೂರೈಸಲಾಗುತ್ತಿದೆ. ಇದರಿಂದ ಹೃದಯಾಘಾತಕ್ಕೆ ಒಳಗಾಗುವ ರೋಗಿಗೆ ಸ್ಥಳೀಯ ಮಟ್ಟದಲ್ಲೇ ಪ್ರಾಥಮಿಕ ಹಂತದ ಹಾಗೂ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ಶುಶ್ರೂಷಕರಿಗೆ ತರಬೇತಿ ನೀಡಲಾಗಿದೆ. ಉಳಿದ ತಾಲೂಕು ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ 2ನೇ ಹಂತದಲ್ಲಿ ಯೋಜನೆ ಜಾರಿಯಾಗಲಿದೆ ಎಂದರು.
ಸ್ಯಾಟಲೈಟ್ ಕೇಂದ್ರಗಳು: ಹುಬ್ಬಳ್ಳಿಯಲ್ಲಿ 430 ಹಾಸಿಗೆಗಳ ಜಯದೇವ ಶಾಖೆ ಕಾಮಗಾರಿ ಪ್ರಾರಂಭವಾಗಿದ್ದು, ಮುಂದಿನ 3 ವರ್ಷಗಳಲ್ಲಿ ಸೇವೆಗೆ ಸಿದ್ಧವಾಗಲಿದೆ. ಇದಲ್ಲದೆ ಕೆ.ಸಿ. ಜನರಲ್, ಇಎಸ್ಐ ಆಸ್ಪತ್ರೆ ಸೇರಿ ಕೆಲವೆಡೆ ಸ್ಯಾಟಲೈಟ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವು ಡೇ-ಕೇರ್ ಸೇವೆ ನೀಡಲಿವೆ. ಇಲ್ಲಿ ಪ್ರಾಥಮಿಕ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ.
ವೈದ್ಯರ ಸಂಪರ್ಕ ಮುಖ್ಯ: ರಾಜ್ಯದ ಯಾವುದೇ ಭಾಗದಲ್ಲಿ ಹೃದಯಾಘಾತ ಸೇರಿ ಹೃದಯ ಸಮಸ್ಯೆಗೆ ಒಳಗಾದ ರೋಗಿಗಳನ್ನು ಏಕಾಏಕಿ ಜಯದೇವ ಆಸ್ಪತ್ರೆಗೆ ರೆಫರ್ ಮಾಡುವ ಪದ್ಧತಿ ರೂಢಿಯಲ್ಲಿದೆ. ಇದರಿಂದ ನಮ್ಮ ಆಸ್ಪತ್ರೆಯಲ್ಲಿ ವೈದ್ಯರು/ಸಿಬ್ಬಂದಿಗೆ ಒತ್ತಡ ಹೆಚ್ಚುವುದರ ಜತೆಗೆ ರೋಗಿಯ ಕುಟುಂಬದವರಿಗೆ ಆರ್ಥಿಕ ಹೊರೆಯಾಗಲಿದೆ. ಹೀಗಾಗಿ ಆಸ್ಪತ್ರೆಗೆ ರೋಗಿಯನ್ನು ರೆಫರ್ ಮಾಡುವ ಮುನ್ನ ಸಂಬಂಧಪಟ್ಟ ಆಸ್ಪತ್ರೆ ವೈದ್ಯರೊಂದಿಗೆ ರೋಗಿಯ ಆರೋಗ್ಯದ ಮಾಹಿತಿ ಹಂಚಿಕೊಂಡು ರ್ಚಚಿಸಿ ನಂತರ ಕಳುಹಿಸುವುದು ಸೂಕ್ತ ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.