ನ್ಯೂಸ್

ಅತ್ಯಾಚಾರ ತಪ್ಪಿಸಲು ಮನೆಯಲ್ಲಿಯೇ ಇರಿ, ಗುಜರಾತ್ ಪೊಲೀಸರ ಪೋಸ್ಟರ್, ವಿವಾದದ ಬಳಿಕ ತೆರವು| Sexist Poster

Sexist Poster: ತಡರಾತ್ರಿ ಪಾರ್ಟಿಗಳಿಗೆ ಹಾಜರಾಗುವುದು ಅತ್ಯಾಚಾರ, ಗ್ಯಾಂಗ್​ ರೇಪ್​ನಂತಹ ಕೃತ್ಯಗಳಿಗೆ ಆಹ್ವಾನ ನೀಡಿದಂತೆ. ಕತ್ತಲೆ ಪ್ರದೇಶಗಳಿಗೆ ನಿಮ್ಮ ಸ್ನೇಹಿತೆಯರನ್ನು ಕರೆದೊಯ್ಯಬೇಡಿ, ಅತ್ಯಾಚಾರ ತಪ್ಪಿಸಲು ಮನೆಯಲ್ಲಿಯೇ ಇರಿ ಎಂದು ಗುಜರಾತ್ ಸಂಚಾರಿ ಪೊಲೀಸರು ಮಹಿಳಾ ಸುರಕ್ಷತೆ ಬಗ್ಗೆ ಅಳವಡಿಸಿದ್ದ ವಿವಾದಾತ್ಮಕ ಪೋಸ್ಟರ್​ಗಳು ವೈರಲ್ ಆಗಿವೆ.

ಸೋಲಾ, ಚಂದ್ಲೋಡಿಯಾದಂತ ಪ್ರದೇಶಗಳಲ್ಲಿ ಗುಜರಾತಿ ಭಾಷೆಯಲ್ಲಿ ಸತ್ತಾರ್ಕ್ ಎಂಬ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಹಾಕಲಾಗಿದ್ದ ಪೋಸ್ಟರ್​ಗ​​ಳು ವಿವಾದವಾಗುತ್ತಿದ್ದಂತೆ ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಸತ್ತಾರ್ಕ್ ಎಂಬ ಸಂಸ್ಥೆಗೆ ಮಹಿಳಾ ಜಾಗೃತಿ ಬಗ್ಗೆ ಪೋಸ್ಟರ್ ರಚಿಸಲು ಅಹ್ಮದಾಬಾದ್ ಸಂಚಾರ ಪೊಲೀಸರು ಪ್ರಾಯೋಜಕತ್ವ ನೀಡಿದ್ದಾರೆ. ಈ ಬಗ್ಗೆ ಅಹ್ಮದಾಬಾದ್ ಟ್ರಾಫಿಕ್ ವೆಸ್ಟ್ ಡಿಸಿಪಿ ನೀತಾ ದೇಸಾಯಿ, ಎಸಿಪಿ ಶೈಲೇಶ್ ಮೋದಿ ಪ್ರಾಯೋಜಕತ್ವ ನೀಡಿದ್ದನ್ನು ದೃಢಪಡಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಏತನ್ಮದ್ಧೆ ಮಹಿಳೆಯರಿಗೆ ಬಹಿರಂಗವಾಗಿ ಅತ್ಯಾಚಾರ, ಆತಂಕ,  ಭಯ ಹುಟ್ಟಿಸುವಂತಹ ಇಂತಹ ಪೋಸ್ಟರ್ ಹಾಕಿಸಿದ ಪೊಲೀಸ್ ಇಲಾಖೆಯ ಹೊಣೆಗಾರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದ್ದು, ಪೋಸ್ಟರ್​ಗಳ ವಿರುದ್ಧ ವ್ಯಾಪಾಕ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ(ಸಂಚಾರ) ಎನ್.ಎನ್.ಚೌಧರಿ, "ಸ್ಥಳೀಯ ಬರಹಗಾರರೊಬ್ಬರು ನಡೆಸುತ್ತಿರುವ ಸತ್ತಾರ್ಕ್ ಗ್ರೂಪ್​ಗೆ ಸಂಚಾರ ಜಾಗೃತಿ ಪೋಸ್ಟರ್​ಗಳನ್ನು ಹಾಕಲು ಅನುಮತಿ ನೀಡಲಾಗಿದೆಯೇ ಹೊರೆತು ಲೈಂಗಿಕ ದೌರ್ಜನ್ಯದ ಬೆದರಿಕೆ ಸಂದೇಶಗಳನ್ನು ಹಾಕಲು ಅಲ್ಲ, ನಾವು ಇಂತಹ ಸಂದೇಶಗಳನ್ನು ಅನುಮತಿಸುವುದಿಲ್ಲ. ಇದು ಸ್ವೀಕರ್ಹವಲ್ಲ. ಈಗಾಗಲೇ ಅಂತಹ ಪೋಸ್ಟರ್​ಗಳನ್ನು ತೆರವುಗೊಳಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)