ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ(Vinay Kulkarni), ಇಂದು(ಏ. 25) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಗೆ ತಡೆ ನೀಡುವಂತೆ ಕೋರಿರುವ ಅರ್ಜಿಯೂ ವಿಚಾರಣೆಗೆ ಇನ್ನಷ್ಟೇ ನಿಗದಿಯಾಬೇಕಿದೆ. ಹೈಕೋರ್ಟ್ ವಕೀಲ ಎಸ್.ಸುನೀಲ್ ಕುಮಾರ್ ಅವರು ವಿನಯ್ ಕುಲಕರ್ಣಿ ಪರ ವಾದ ಮಂಡಿಸಲಿದ್ದಾರೆ.
ಏ. 15ರಂದು ಧಾರವಾದ ಗ್ರಾಮೀಣ ಕ್ಷೇತ್ರದ ಶಾಕಸರಾಗಿದ್ದ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ, ಏ. 17ರಂದು 16 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಪ್ರಕರಣದ ಹಿನ್ನೆಲೆ ಏನು?
ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣವು ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೊಲೆಗೆ ರಾಜಕೀಯ ದ್ವೇಷವೇ ಮುಖ್ಯ ಕಾರಣ ಎಂಬ ಆರೋಪಗಳು ಆರಂಭದಿಂದಲೂ ಕೇಳಿಬಂದಿದ್ದವು. ಈ ಪ್ರಕರಣದ ಪ್ರಮುಖ ತಿರುವು ಎಂದರೆ ಕಾಂಗ್ರೆಸ್ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ.
ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರು ಕೊಲೆಯ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಉಲ್ಲೇಖಿಸಿ, 2020ರಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು ಒಂಬತ್ತು ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.
ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ, ಯೋಗೀಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ಜಮೀನು ವಿಚಾರ ಹಾಗೂ ರಾಜಕೀಯ ಪ್ರಾಬಲ್ಯಕ್ಕೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಇದೇ ದ್ವೇಷದಿಂದಾಗಿ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಲು ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪಗಳನ್ನು ಹೊರಿಸಲಾಯಿತು.
ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ್ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದರು. ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತಾ ಏನೋ ಪ್ರಮುಖ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ. 2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತ ಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.